ಮಂಗಳೂರು, ಸೆ.27: ಪಾಂಡೇಶ್ವರದ ಎಮ್ಮೆಕೆರೆಯಲ್ಲಿರುವ ರಮಾ ಲಕ್ಷ್ಮೀ ನಾರಾಯಣ ಹಾಲ್‌ನ ಮೊದಲ ಮಹಡಿಯ ತಡೆಗೋಡೆ ಕುಸಿದು 16 ವರ್ಷದ ವಿದ್ಯಾರ್ಥಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಕಾರ್ಯಕ್ರಮದ ಆಯೋಜಕ ಹಾಗೂ ಕಟ್ಟಡದ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.ಮಂಗಳೂರಿನ ಸೈಂಟ್ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ಕಾಮರ್ಸ್ ವ್ಯಾಸಂಗ ಮಾಡುತ್ತಿದ್ದ ಮೊಹಿದೀನ್ ಶಮ್ಯಾಸ್ (16) ಮೃತಪಟ್ಟ ವಿದ್ಯಾರ್ಥಿ.ಸೆ.26ರಂದು ಮಧ್ಯಾಹ್ನ ಹಾಲ್‌ನಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ (ಆಲ್ ಕಾಲೇಜ್ ಸ್ಟೂಡೆಂಟ್ ಅಸೋಸಿಯೇಷನ್) ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಇತರ ಹುದ್ದೆಗಳ ಆಯ್ಕೆ ಸಂಬಂಧ ಪ್ರಮಾಣ ವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳು ರ‍್ಯಾಲಿಯಲ್ಲಿ ಕಟ್ಟಡದ ಹೊರಭಾಗದಿಂದ ಹಾಲ್‌ನತ್ತ ತೆರಳುತ್ತಿದ್ದಾಗ, ಮೊದಲ ಮಹಡಿಯ ಪ್ಯಾಸೇಜ್‌ನಲ್ಲಿ ಹಲವು ವಿದ್ಯಾರ್ಥಿಗಳು ನಿಂತು ರ‍್ಯಾಲಿಯನ್ನು ವೀಕ್ಷಿಸುತ್ತಿದ್ದರು.ಈ ಸಂದರ್ಭ ಮಧ್ಯಾಹ್ನ ಸುಮಾರು 2.50ಕ್ಕೆ ಪ್ಯಾಸೇಜ್‌ನ ತಡೆಗೋಡೆ ಏಕಾಏಕಿ ಕುಸಿದು ಕೆಳಗೆ ನಿಂತಿದ್ದ ಮೊಹಿದೀನ್ ಶಮ್ಯಾಸ್ ಅವರ ತಲೆಯ ಮೇಲೆ ಬಿದ್ದಿದೆ. ಘಟನೆಯಲ್ಲಿ ಅವರ ತಲೆ, ಎರಡೂ ಕಾಲು ಹಾಗೂ ಭುಜಕ್ಕೆ ಗಂಭೀರ ಗಾಯಗಳಾಗಿವೆ. ಇತರ ವಿದ್ಯಾರ್ಥಿಗಳಾದ ಮೊಹಮ್ಮದ್ ಸನಾನ್, ಅಹ್ಮದ್ ಮೊಹಮ್ಮದ್ ಹನೀಫ್ ಹಾಗೂ ದಾವೂದ್ ಅವರಿಗೂ ಗಾಯಗಳಾಗಿವೆ.ಗಾಯಾಳುಗಳನ್ನು ವಿದ್ಯಾರ್ಥಿಗಳು ಕಾರಿನಲ್ಲಿ ಐಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೊಹಿದೀನ್ ಶಮ್ಯಾಸ್ ಅವರನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11.33ಕ್ಕೆ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿ ಕಾರ್ಯಕ್ರಮ ನಡೆಸಲು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಅವಕಾಶ ನೀಡಲಾಗಿದೆ ಎಂದು ಮೃತ ವಿದ್ಯಾರ್ಥಿಯ ತಂದೆ ಮೊಹಮ್ಮದ್ ಇಲಿಯಾಸ್ ಮೊಹಿದಿನಬ್ಬ ಅವರು ದೂರಿನಲ್ಲಿ ಆರೋಪಿಸಿದ್ದಾರೆ.ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆ ಇದೆ ಎಂಬುದು ತಿಳಿದಿದ್ದರೂ ಕಟ್ಟಡದ ಮಾಲೀಕ ಪರೀಕ್ಷಿತ್ ರೈ ಅವರು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಕಾರ್ಯಕ್ರಮದ ಆಯೋಜಕ ದಿನಕರ್ ಶೆಟ್ಟಿ ಅವರಿಗೂ ಈ ವಿಚಾರ ತಿಳಿದಿದ್ದರೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಯೋಜಕ ದಿನಕರ್ ಶೆಟ್ಟಿ ಹಾಗೂ ಕಟ್ಟಡದ ಮಾಲೀಕ ಪರೀಕ್ಷಿತ್ ರೈ ವಿರುದ್ಧ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!