
ಪುತ್ತೂರು: ಪುತ್ತೂರು ತಾಲೂಕಿನ ಸಾರ್ವಜನಿಕರು ಎದುರಿಸುತ್ತಿರುವ ಅಕ್ರಮ–ಸಕ್ರಮ ಹಾಗೂ 94C ಅರ್ಜಿಗಳ ವಿಲೇವಾರಿ ವಿಳಂಬ, ಮಂಜೂರಾತಿ ಆದ ಕಡತಗಳಿಗೆ ಹಕ್ಕುಪತ್ರ ಮತ್ತು ಪಹಣಿ ನೀಡುವಲ್ಲಿನ ವಿಳಂಬ ಹಾಗೂ ಪೌತಿ ಖಾತೆ ಬದಲಾವಣೆಯಲ್ಲಿನ ಸಮಸ್ಯೆಗಳ ಕುರಿತು ಪುತ್ತಿಲ ಪರಿವಾರದ ನಿಯೋಗವು ಪುತ್ತೂರು ತಹಶೀಲ್ದಾರ್‌ರನ್ನು ಭೇಟಿ ಮಾಡಿ ಚರ್ಚಿಸಿತು.ಅಕ್ರಮ–ಸಕ್ರಮ ಸಮಿತಿಯಲ್ಲಿ ಮಂಜೂರಾದ ಕಡತಗಳ ಪೈಕಿ ಕಳೆದ ಮೂರು ವರ್ಷಗಳಲ್ಲಿ ಅಂದಾಜು 25 ಕಡತಗಳಿಗೆ ಮಾತ್ರ ಹಕ್ಕುಪತ್ರ ಹಾಗೂ ಪಹಣಿ ನೀಡಲಾಗಿದೆ. ಉಳಿದ ಮಂಜೂರಾದ ಕಡತಗಳಿಗೆ ಇದುವರೆಗೆ ಹಕ್ಕುಪತ್ರ ಹಾಗೂ ಪಹಣಿ ನೀಡದಿರುವುದರಿಂದ ಕೃಷಿಕರಿಗೆ ಬೆಳೆ ವಿಮೆ ಹಾಗೂ ಕೃಷಿ ಸಾಲ ಪಡೆಯಲು ತೊಂದರೆಯಾಗುತ್ತಿದೆ ಎಂದು ನಿಯೋಗ ತಹಶೀಲ್ದಾರ್‌ರ ಗಮನಕ್ಕೆ ತಂದಿತು.ಮಂಜೂರಾದ ಎಲ್ಲ ಕಡತಗಳಿಗೆ ಶೀಘ್ರವಾಗಿ ಹಕ್ಕುಪತ್ರ ಹಾಗೂ ಪಹಣಿ ಒದಗಿಸಬೇಕು. ಇಲ್ಲದಿದ್ದಲ್ಲಿ ಕೃಷಿಕರು ಹಾಗೂ ಫಲಾನುಭವಿಗಳನ್ನು ಸೇರಿಸಿಕೊಂಡು ಪುತ್ತಿಲ ಪರಿವಾರದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು. ಅಲ್ಲದೆ, ಕೆಲವು ಗ್ರಾಮಗಳಲ್ಲಿ ದೊಡ್ಡ ಸರ್ವೇ ನಂಬರ್‌ಗಳಿಗೆ ಸಂಬಂಧಿಸಿದ ಪೋಡಿ ಸಮಸ್ಯೆಗಳನ್ನು ಕೂಡ ಶೀಘ್ರವಾಗಿ ಪರಿಹರಿಸುವಂತೆ ಮನವಿ ಮಾಡಲಾಯಿತು.ಅಕ್ರಮ–ಸಕ್ರಮ ಯೋಜನೆಯಡಿ ಹಲವು ವರ್ಷಗಳಿಂದ ಅರ್ಜಿ ಸಲ್ಲಿಸಿ ವಿಲೇವಾರಿಗಾಗಿ ಕಾಯುತ್ತಿರುವ ಅರ್ಜಿದಾರರ ಸಮಸ್ಯೆಯನ್ನೂ ನಿಯೋಗ ಪ್ರಸ್ತಾಪಿಸಿತು. ಕರ್ನಾಟಕ ಭೂ ಕಂದಾಯ ಕಾಯ್ದೆಯ 94C ಅಡಿಯಲ್ಲಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳು ಕೂಡ ಬಾಕಿ ಉಳಿದಿದ್ದು, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಅಗತ್ಯ ದಾಖಲೆಗಳ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ, ಅರ್ಹ ಅರ್ಜಿದಾರರ ಅರ್ಜಿಗಳನ್ನು ನಿಯಮಾನುಸಾರ ಆದ್ಯತೆಯ ಮೇರೆಗೆ ವಿಲೇವಾರಿ ಮಾಡುವಂತೆ ಮನವಿ ಮಾಡಲಾಯಿತು.ಇದರೊಂದಿಗೆ, ಕುಟುಂಬದ ಸದಸ್ಯರ ನಿಧನದ ಬಳಿಕ ಜಮೀನು ಹಾಗೂ ಆಸ್ತಿಗಳ ಪೌತಿ ಖಾತೆ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ವಿಳಂಬ ಮತ್ತು ಕಚೇರಿ ಮಟ್ಟದ ಸಮಸ್ಯೆಗಳ ಬಗ್ಗೆಯೂ ತಹಶೀಲ್ದಾರ್‌ರ ಗಮನ ಸೆಳೆಯಲಾಯಿತು. ಅರ್ಹ ಪ್ರಕರಣಗಳಲ್ಲಿ ಪೌತಿ ಖಾತೆ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಲಾಯಿತು.ಪುತ್ತಿಲ ಪರಿವಾರದ ನಿಯೋಗವು ಅಕ್ರಮ–ಸಕ್ರಮ, 94C, ಹಕ್ಕುಪತ್ರ–ಪಹಣಿ, ಪೋಡಿ ಹಾಗೂ ಪೌತಿ ಖಾತೆಗೆ ಸಂಬಂಧಿಸಿದ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿತು.










