ಪುತ್ತೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಸಿಟಿಒ ಗುಡ್ಡದಲ್ಲಿ ನಿರ್ಮಿಸಲಾಗಿರುವ ಕಟ್ಟಡಕ್ಕೆ ಸಿಎಸ್‌ಸಿ (ಕಾಮನ್ ಸರ್ವಿಸ್ ಸೆಂಟರ್) ಸ್ಥಳಾಂತರಿಸುವುದರಿಂದ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಅನಾನುಕೂಲವಾಗಲಿದೆ ಎಂದು ದ.ಕ. ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಿಎಸ್‌ಸಿ ತಾಲೂಕು ಪಂಚಾಯಿತಿ ಕಟ್ಟಡದಲ್ಲಿದ್ದು, ವಿದ್ಯಾರ್ಥಿಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದವರಿಗೆ ಸುಲಭವಾಗಿ ತಲುಪಲು ಸಾಧ್ಯವಾಗುತ್ತಿದೆ. ವಿದ್ಯಾರ್ಥಿವೇತನ, ಅರಿವು ಸಾಲ, ಶ್ರಮಶಕ್ತಿ ಸೇರಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆ ಹಾಗೂ ಮಾಹಿತಿ ಪಡೆಯಲು ಇಲ್ಲಿ ಅವಕಾಶವಿದೆ. ಸುಮಾರು 1,000 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.ಸಿಟಿಒ ಗುಡ್ಡಕ್ಕೆ ಸಿಎಸ್‌ಸಿ ಸ್ಥಳಾಂತರಿಸಿದರೆ ಜನರು ದೂರದ ಪ್ರದೇಶಕ್ಕೆ ತೆರಳಬೇಕಾಗುತ್ತದೆ. ಸಿಎಸ್‌ಸಿಗೆ ಸೈಬರ್ ಸೆಂಟರ್ ಮಾದರಿಯ ಸಣ್ಣ ಕಚೇರಿಯಷ್ಟೇ ಸಾಕಾಗಿದ್ದು, 2,000 ಚದರ ಅಡಿಯಷ್ಟು ದೊಡ್ಡ ಕಟ್ಟಡದ ಅಗತ್ಯವಿಲ್ಲ. ಹೀಗಾಗಿ ಕಟ್ಟಡವನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಬಾಲಕರ ಹಾಸ್ಟೆಲ್ ಆಗಿ ಬಳಸುವುದು ಸೂಕ್ತ ಎಂಬ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಸಚಿವ ಝಮೀರ್ ಅಹ್ಮದ್ ಅವರಿಗೆ ಮನವಿ ಸಲ್ಲಿಸಿದ್ದರು. ಸಚಿವರು ಹಾಸ್ಟೆಲ್ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಈಗಾಗಲೇ ಸುಮಾರು 50 ಮಂಚಗಳು ಬಂದಿವೆ ಎಂದು ತಿಳಿಸಿದರು.ಪುತ್ತೂರು ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಒಂಬತ್ತು ಹಾಸ್ಟೆಲ್‌ಗಳಿದ್ದರೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಯಾವುದೇ ಹಾಸ್ಟೆಲ್ ಇಲ್ಲ. ಪುತ್ತೂರು ಅಭಿವೃದ್ಧಿ ಹೊಂದುತ್ತಿರುವುದು ಹಾಗೂ ಮೆಡಿಕಲ್ ಕಾಲೇಜು ಮಂಜೂರಾಗಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಅಗತ್ಯವಿದೆ ಎಂದರು.ಬಿಜೆಪಿ ಆರೋಪಕ್ಕೆ ಎಸ್‌ಡಿಪಿಐ ಸಾಥ್: ಬಿಜೆಪಿ ಶಾಸಕ ಸಂಜೀವ ಮಠಂದೂರು ಅವರ ಅವಧಿಯಲ್ಲಿ ನಿರ್ಮಿಸಲಾದ ಕಟ್ಟಡಕ್ಕೆ ಸಿಎಸ್‌ಸಿ ಸ್ಥಳಾಂತರವಾಗದೆ ಪಾಳು ಬಿದ್ದಿದೆ ಎಂದು ಆರೋಪಿಸುತ್ತಿದೆ. ಇದಕ್ಕೆ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಬಿಜೆಪಿ ಟೀಕಿಸಿದೆ. ಬಳಿಕ ಎಸ್‌ಡಿಪಿಐ ಕೂಡ ಇದೇ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿದೆ. ಬಿಜೆಪಿಯವರು ಎತ್ತಿದ ವಿಚಾರವನ್ನೇ ಎಸ್‌ಡಿಪಿಐ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಮಹಮ್ಮದ್ ಆಲಿ ಆರೋಪಿಸಿದರು.ಆಟೋ ಬಾಡಿಗೆಯೇ ಹೆಚ್ಚಾಗಬಹುದು: ಖಾಸಗಿ ಸೈಬರ್ ಸೆಂಟರ್‌ಗಳಲ್ಲಿ ವಿವಿಧ ಅರ್ಜಿಗಳನ್ನು ಸಲ್ಲಿಸಲು ₹100ರಿಂದ ₹200ರವರೆಗೆ ಶುಲ್ಕ ಪಡೆಯಲಾಗುತ್ತಿದೆ. ಸಿಎಸ್‌ಸಿಯನ್ನು ದೂರದ ಗುಡ್ಡ ಪ್ರದೇಶಕ್ಕೆ ಸ್ಥಳಾಂತರಿಸಿದರೆ ಅಲ್ಲಿಗೆ ತೆರಳಲು ಬೇಕಾಗುವ ಆಟೋ ಬಾಡಿಗೆಯೇ ಇದಕ್ಕಿಂತ ಹೆಚ್ಚಾಗಬಹುದು. ಇದರಿಂದ ಉಚಿತ ಸೇವೆ ನೀಡುವ ಉದ್ದೇಶದ ಸಿಎಸ್‌ಸಿಗಿಂತ ಖಾಸಗಿ ಸೈಬರ್ ಸೆಂಟರ್‌ಗಳೇ ಜನರಿಗೆ ಅನುಕೂಲಕರವಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದರು.ಸೂಕ್ತ ರಸ್ತೆ ಸಂಪರ್ಕವಿಲ್ಲದ ಪ್ರದೇಶಗಳಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವ ಬದಲು ಜನರಿಗೆ ಸುಲಭವಾಗಿ ತಲುಪುವ ಸ್ಥಳಗಳನ್ನು ಆಯ್ಕೆ ಮಾಡಬೇಕು. ಸಿಟಿಒ ಗುಡ್ಡದ ಕಟ್ಟಡವನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹಾಸ್ಟೆಲ್ ಆಗಿ ಬಳಸುವುದು ಹೆಚ್ಚು ಪ್ರಯೋಜನಕಾರಿ ಎಂದು ಮಹಮ್ಮದ್ ಆಲಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಜಾದ್, ಶಕೂರು ಹಾಜಿ, ಯಾಕೂಬ್ ಮುಲಾರ್, ವಿಲ್ಲೆಡ್ ಫೆರ್ನಾಂಡಿಸ್, ರಿಯಾಜ್ ಪರ್ಲಡ್ಕ, ಅಬ್ಬಾಸ್ ಕುಂತೂರು ಹಾಗೂ ಸಾಲಿ ಶಾಂತಿನಗರ ಉಪಸ್ಥಿತರಿದ್ದರು.











