ಮಂಗಳೂರು: ನಗರದಲ್ಲಿ ನಿಷೇಧಿತ ಮಾದಕವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮಂಗಳೂರು ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹24 ಲಕ್ಷ ಮೌಲ್ಯದ 240 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.ಬಂಧಿತರನ್ನು ಮುಡಿಪು ಕೈರಂಗಳ ಗ್ರಾಮದ ನವಾಜ್ ಅಲಿಯಾಸ್ ನವ್ವಾ ಅಲಿಯಾಸ್ ಮುಡಿಪು ನವಾಜ್ (35), ಮೊಹಮ್ಮದ್ ಆರೀಫ್ ಎನ್. (36) ಹಾಗೂ ಲಾಯ್ಡ್ ಡಿಸೋಜಾ (35) ಎಂದು ಗುರುತಿಸಲಾಗಿದೆ.ಬೆಂಗಳೂರು ನಗರದಿಂದ ಎಂಡಿಎಂಎ ಖರೀದಿಸಿ ಮಂಗಳೂರು ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಸೆ.26ರಂದು ಸಂಜೆ ಉಳ್ಳಾಲ ತಾಲ್ಲೂಕಿನ ಮುಡಿಪು ಕಾಯರ್‌ಗೋಳಿ ಕ್ರಾಸ್‌ ಬಳಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದರು.ಈ ವೇಳೆ ಆರೋಪಿಗಳನ್ನು ಬಂಧಿಸಿ, ₹24 ಲಕ್ಷ ಮೌಲ್ಯದ 240 ಗ್ರಾಂ ಎಂಡಿಎಂಎ, ನಾಲ್ಕು ಮೊಬೈಲ್ ಫೋನ್‌ಗಳು ಹಾಗೂ ಮಾದಕವಸ್ತು ಸಾಗಾಟಕ್ಕೆ ಬಳಸಿದ್ದ ಟೆಂಪೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ₹29.80 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.16 ಪ್ರಕರಣಗಳಲ್ಲಿ ಆರೋಪಿ:ಬಂಧಿತ ನವಾಜ್ ವಿರುದ್ಧ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲ್ಲೆ, ಬೆದರಿಕೆ, ಕೊಲೆಯತ್ನ, ಅಪಹರಣ, ಅತ್ಯಾಚಾರ, ವಂಚನೆ, ದನಗಳ್ಳತನ ಹಾಗೂ ಮಾದಕವಸ್ತು ಮಾರಾಟ ಸೇರಿದಂತೆ ಸುಮಾರು 16 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಣಾಜೆ ಠಾಣೆಯಲ್ಲಿ 12, ಉಳ್ಳಾಲ ಠಾಣೆಯಲ್ಲಿ 2, ಮುಲ್ಕಿ ಹಾಗೂ ಸುರತ್ಕಲ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಉಳ್ಳಾಲ ಮತ್ತು ಕೊಣಾಜೆ ಠಾಣೆಗಳಲ್ಲಿ ತಲಾ ಎರಡು ಪ್ರಕರಣಗಳು ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳಿವೆ.ಜಾಲದ ಇತರರ ಪತ್ತೆಗೆ ತನಿಖೆ:ಮಾದಕವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!