ಮಂಗಳೂರುದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದ ಅಡಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳು ಎದುರಿಸುತ್ತಿರುವ ಸ್ಥಳೀಯ ಹವಾಮಾನ ಸವಾಲುಗಳಿಗೆ ಅನುಗುಣವಾಗಿ ‘ಪುನರ್‌ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ’ (RWBCIS)ಯನ್ನು ಮರುಪರಿಷ್ಕರಿಸಬೇಕು ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಬಹುವಾರ್ಷಿಕ ತೋಟಗಾರಿಕಾ ಬೆಳೆಗಳು ಸಾಮಾನ್ಯ ಋತುಮಾನದ ಬೆಳೆಗಳಿಗಿಂತ ವಿಭಿನ್ನ ರೀತಿಯ ಹವಾಮಾನ ಆಪತ್ತುಗಳನ್ನು ಎದುರಿಸುತ್ತವೆ. ನಿರಂತರ ಮಳೆ, ಆರ್ದ್ರತೆ, ರೋಗಬಾಧೆ ಹಾಗೂ ತೋಟಗಳಲ್ಲಿ ನೀರು ನಿಲ್ಲುವಂತಹ ಸ್ಥಳೀಯ ಹವಾಮಾನ ವೈಪರೀತ್ಯಗಳಿಂದ ಬೆಳೆಗಳಿಗೆ ಭಾರಿ ಹಾನಿಯಾಗುತ್ತದೆ. ಆದರೆ ಸಮೀಪದ ಹವಾಮಾನ ಕೇಂದ್ರದಲ್ಲಿ ದಾಖಲಾಗುವ ಮಳೆ ಅಥವಾ ತಾಪಮಾನ ನಿಗದಿತ ಮಿತಿಯನ್ನು ಮೀರದ ಕಾರಣ ರೈತರಿಗೆ ವಿಮಾ ಪರಿಹಾರ ದೊರೆಯದ ಸಂದರ್ಭಗಳಿವೆ ಎಂದು ಅವರು ಗಮನ ಸೆಳೆದರು.ತೋಟಗಾರಿಕಾ ಬೆಳೆಗಳ ನೈಜ ನಷ್ಟವನ್ನು ಆಧರಿಸಿ ವಿಮಾ ಯೋಜನೆ ರೂಪಿಸುವುದು ಅಗತ್ಯವಾಗಿದ್ದು, ಹವಾಮಾನ ಕೇಂದ್ರಗಳ ಸಾಂದ್ರತೆ, ಅಧಿಸೂಚಿತ ಘಟಕಗಳ ಗಾತ್ರ, ಮಳೆ-ಆರ್ದ್ರತೆ ಮೇಲ್ವಿಚಾರಣಾ ವ್ಯವಸ್ಥೆ, ವಿಮಾ ಮೊತ್ತ ಹಾಗೂ ಪರಿಹಾರ ಪಾವತಿಯ ಕಾಲಮಿತಿಯಂತಹ ತಾಂತ್ರಿಕ ಅಂಶಗಳನ್ನು ಸಮಗ್ರವಾಗಿ ಪರಿಗಣಿಸಬೇಕು ಎಂದು ಚೌಟ ಹೇಳಿದರು.ಈ ಸಂಬಂಧ ಕೃಷಿ ವಿಜ್ಞಾನಿಗಳು ಮತ್ತು ವಿಮಾ ತಜ್ಞರ ಜಂಟಿ ಸಮಿತಿ ರಚಿಸಿ ಯೋಜನೆಯ ರೂಪುರೇಷೆ ಸಿದ್ಧಪಡಿಸಬೇಕು. ಐಸಿಎಆರ್ ಸಂಸ್ಥೆಗಳು, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳು, ವಿಮಾ ಕಂಪನಿಗಳು, ಕರ್ನಾಟಕ ಸರ್ಕಾರ ಹಾಗೂ ಬೆಳೆಗಾರರ ಪ್ರತಿನಿಧಿಗಳನ್ನು ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕರಾವಳಿ ಹಾಗೂ ಮಲೆನಾಡಿನ ಆಯ್ದ ಜಿಲ್ಲೆಗಳಲ್ಲಿ ಪರಿಷ್ಕೃತ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿ, ಬೆಳೆ ನಾಶದ ಆಧಾರದ ಮೇಲೆ ಪರಿಹಾರ ನೀಡುವ ವ್ಯವಸ್ಥೆ ರೂಪಿಸಬೇಕು. ಟ್ರಿಗರ್ ಆಧಾರಿತ ಪರಿಹಾರ ಪಾವತಿಯ ಮಾಹಿತಿಯನ್ನು ಪಾರದರ್ಶಕವಾಗಿ ಪ್ರಕಟಿಸುವುದರ ಜೊತೆಗೆ, ಸೂಕ್ತ ತೋಟಗಾರಿಕಾ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರಗಳಿಗೆ ಮಾದರಿ ಅಧಿಸೂಚನೆ ಹಾಗೂ ಕಾಲಮಿತಿಯನ್ನೂ ಒದಗಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಅವರು ಆಗ್ರಹಿಸಿದರು.










