
ಸುಬ್ರಹ್ಮಣ್ಯ: ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣದ ನಡುವೆ ಬರುವ ಎಡಕುಮಾರಿ-ಶಿರಿಬಾಗಿಲು ನಡುವೆ ಗುಡ್ಡ ಕುಸಿದು ಮೆಟೀರಿಯಲ್ ರೈಲ್ವೆ ಹಳಿ ಮೇಲೆ ಬಂಡೆಗಳು ಬಿದ್ದ ಪರಿಣಾಮ ರೈಲು ಸಂಚಾರದ ಸಮಯದಲ್ಲಿ ವ್ಯತ್ಯಯವಾಗಿದೆ.
ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ಕಡಗರವಳ್ಳಿಗೆ ಬೆಳಗ್ಗೆ 3:40ಕ್ಕೆ ಆಗಮಿಸಿದ್ದು, ತಡವಾಗಿ ಹೊರಡಲಿದೆ. ಹಾಗೇ ರೈಲು ಸಂಖ್ಯೆ 16585 SMVT ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ಸಕಲೇಶಪುರಕ್ಕೆ ಬೆಳಗ್ಗೆ 3:10ಕ್ಕೆ, ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸಕಲೇಶಪುರಕ್ಕೆ ಬೆಳಗ್ಗೆ 6:26ಕ್ಕೆ ಆಗಮಿಸಿದ್ದು, ಇವೆರಡು ಕೂಡ ತಡವಾಗಿ ಹೊರಡಲಿದೆ.
ಹೀಗಾಗಿ ರೈಲಿನಲ್ಲಿರುವ ಪ್ರಯಾಣಿಕರಿಗೆ ಕುಡಿಯುವ ನೀರು, ಬಿಸ್ಕೆಟ್, ಉಪಹಾರ ಮತ್ತು ಚಹಾ ವ್ಯವಸ್ಥೆ ಮಾಡಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.






