
ಪುತ್ತೂರು: ಕಡಬ ಪಟ್ಟಣ ಪಂಚಾಯಿತಿಯ ಕಳಾರ ವಾರ್ಡ್–1ರಲ್ಲಿ ಬಿಜೆಪಿ ಅಭ್ಯರ್ಥಿ ಒಂದೇ ಒಂದು ಮತ ಪಡೆಯಲು ವಿಫಲವಾಗಿ ಶೂನ್ಯ ಸಂಪಾದನೆ ಮಾಡಿದ್ದು, ರಾಷ್ಟ್ರದ ಅಗ್ರಪಕ್ಷಕ್ಕೆ ತೀವ್ರ ಮುಖಭಂಗ ಉಂಟುಮಾಡಿದೆ. “ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಬಿಜೆಪಿ ಹಳ್ಳಿಯಿಂದ ದಿಲ್ಲಿಯವರೆಗೂ ಘೋಷಣೆ ಮಾಡುತ್ತಿರಬಹುದು, ಆದರೆ ಇಂದಿನವರೆಗೂ ಕಾಂಗ್ರೆಸ್‌ಗೆ ಎಲ್ಲಿಯೂ ಶೂನ್ಯ ಸುತ್ತಿಲ್ಲ. ಆದರೆ ಕಡಬದಲ್ಲಿ ಬಿಜೆಪಿ ಮಾಡಿದ ಶೂನ್ಯ ಸಂಪಾದನೆ ದಾಖಲೆ ಬರೆದ ಸೋಲು,” ಎಂದು ಕಡಬ ಪಪಂ ಚುನಾವಣೆಯ ಕಾಂಗ್ರೆಸ್ ಉಸ್ತುವಾರಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ ಹೇಳಿದರು.
ವಾರ್ಡ್‌ವಾರು ಫಲಿತಾಂಶ
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಕಳಾರ ವಾರ್ಡ್-1ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಮನ್ನಾ ಜಬಿನ್ 201 ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದ್ದಾರೆ.
ಎಸ್‌ಡಿಪಿಐ ಅಭ್ಯರ್ಥಿ ಸಮೀರಾ 74 ಮತ ಪಡೆದಿದ್ದಾರೆ.
ಪಕ್ಷೇತರ ಜೈನಾಬಿ 139 ಮತ ಗಳಿಸಿದ್ದಾರೆ.
ಬಿಜೆಪಿಯ ಪ್ರೇಮಾ ಶೂನ್ಯ ಸಂಪಾದನೆ ಮಾಡಿದ್ದಾರೆ.
ಪ್ರೇಮಾ ಈ ವಾರ್ಡ್‌ನ ಮತದಾರರಲ್ಲದ ಕಾರಣ ಅವರಿಗೆ ಮತ್ತು ಕುಟುಂಬದ ಸದಸ್ಯರ ಮತ ಸಿಗದೆ ಇರಬಹುದು. ಆದರೆ “ಬೂತ್‌ನ ಬಿಜೆಪಿ ಅಧ್ಯಕ್ಷರು ಹಾಗೂ ಅಭ್ಯರ್ಥಿಯ ಸೂಚಕರು ಕೂಡ ತಮ್ಮದೇ ಪಕ್ಷದ ಅಭ್ಯರ್ಥಿಗೆ ಮತ ನೀಡದಿರುವುದು ವಿಚಿತ್ರ. ಪಕ್ಷದ ಅಧಿಕೃತ ಅಭ್ಯರ್ಥಿಗೆ ಬೆಂಬಲವಿಲ್ಲದಿದ್ದರೆ ಬೇರೆ ಅಭ್ಯರ್ಥಿಗೆ ಬೆಂಬಲ ಘೋಷಿಸಬಹುದಿತ್ತು. ಆದರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಳಿಕ ಶೂನ್ಯ ಫಲಿತಾಂಶ ಕಂಡಿರುವುದು ಬಿಜೆಪಿಗೆ ನಾಚಿಕೆ ತಂದ ಸಂಗತಿ,” ಎಂದು ಸಾಲ್ಮರ ವ್ಯಂಗ್ಯವಾಡಿದರು.
ಮಾಲೇಶ್ವರ ವಾರ್ಡ್-5ರಲ್ಲಿ ಕಾಂಗ್ರೆಸ್ ಗೆಲುವು
ಮಾಲೇಶ್ವರ ವಾರ್ಡ್-5ರಲ್ಲಿ ಒಟ್ಟು 637 ಮತಗಳಿದ್ದು, ಅದರಲ್ಲಿ ಅಲ್ಪಸಂಖ್ಯಾತರ ಮತಗಳು 110. ಇಲ್ಲಿ ಕಾಂಗ್ರೆಸ್‌ನ ಹನೀಫ್ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಅವರನ್ನು 84 ಮತಗಳ ಅಂತರದಿಂದ ಸೋಲಿಸಿದ್ದಾರೆ.
“ಈ ಎರಡು ವಾರ್ಡ್‌ಗಳ ಫಲಿತಾಂಶ ಹಾಗೂ ಒಟ್ಟಾರೆ ಕಡಬ ಪಪಂ ಫಲಿತಾಂಶವನ್ನು ಗಮನಿಸಿದರೆ, ಬಿಜೆಪಿ ನಡೆಸಿದ ಕೋಮು ರಾಜಕೀಯವನ್ನು ಮತದಾರರು ತಿರಸ್ಕರಿಸಿದ್ದಾರೆ ಎಂಬುದು ಸ್ಪಷ್ಟ,” ಎಂದು ಅವರು ಹೇಳಿದರು.
ಕಾಂಗ್ರೆಸ್‌ಗೆ ಐತಿಹಾಸಿಕ ಜಯ
13 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 8 ಸ್ಥಾನಗಳನ್ನು ಗೆದ್ದು, ಕಡಬ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಗದ್ದುಗೆ ಹಿಡಿದಿದೆ.
“ಕಾಂಗ್ರೆಸ್ ಸಂಘಟಿತ ಹೋರಾಟ, ಅಭ್ಯರ್ಥಿಗಳ ಆಯ್ಕೆಯಲ್ಲಿ ಮೂಡಿದ ಸಹಮತ ಮತ್ತು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಈ ಗೆಲುವಿಗೆ ಕಾರಣ. ಪಂಚ ಗ್ಯಾರಂಟಿಗಳು ಜನರ ಬದುಕಿನ ದಿಕ್ಕನ್ನೇ ಬದಲಿಸಿದ್ದು, ಜನರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರುವುದರಿಂದ ಕಡಬಕ್ಕೆ ಹೆಚ್ಚಿನ ಅನುದಾನ ತರಲು ಸಾಧ್ಯವಾಗಲಿದೆ,” ಎಂದು ನೂರುದ್ದೀನ್ ಸಾಲ್ಮರ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಅಂಚನ್, ಪಕ್ಷದ ಮುಖಂಡರಾದ ನಿರ್ಮಲ್ ಕುಮಾರ್ ಜೈನ್, ನಝಿರ್ ಮಠ ಮತ್ತು ಉಲ್ಲಾಸ್ ಕೋಟ್ಯಾನ್ ಉಪಸ್ಥಿತರಿದ್ದರು.






