ಪುತ್ತೂರು: “ಪುತ್ತೂರು ಶಾಸಕರು ಮಾತು ಎತ್ತಿದರೆ ಕೋಟಿಗಳ ಲೆಕ್ಕಾಚಾರದಲ್ಲಿ ಮಾತನಾಡುತ್ತಾರೆ. ಆದರೆ ಅವರ ಅವಧಿಯಲ್ಲಿ ಒಂದು ಯೋಜನೆಯಾದರೂ ಕಾರ್ಯರೂಪಕ್ಕೆ ಬಂದಿರುವುದನ್ನು ತೋರಿಸಲಿ,” ಎಂದು ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಅವರು ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.

ಅವರು ಹೇಳಿದರು – “ಹಿಂದಿನ ಅವಧಿಯಲ್ಲಿ ಬಂದ ಅನುದಾನದ ಅಭಿವೃದ್ಧಿಯನ್ನು ತಮ್ಮದೇ ಸಾಧನೆ ಎಂದು ಜನರನ್ನು ವಂಚಿಸುವ ಕೆಲಸ ನಿಲ್ಲಿಸಬೇಕು. ಸುಳ್ಳು ಭರವಸೆಗಳನ್ನು ನೀಡುವ ಬದಲು ನಿಜವಾದ ಕಾರ್ಯ ಮಾಡಬೇಕು. ಜನರ ಅಭಿಪ್ರಾಯ, ಸಲಹೆಗಳನ್ನು ಕೇಳುವಷ್ಟು ವ್ಯವಧಾನವಿರಲಿ. ಟೀಕೆ, ಪ್ರಶಂಸೆಗಳನ್ನು ಸ್ವೀಕರಿಸುವ ಧೈರ್ಯ ಜನಪ್ರತಿನಿಧಿಗಳಲ್ಲಿ ಇರಬೇಕು. ಆದರೆ ಪುತ್ತೂರು ಶಾಸಕರು ಪ್ರಶ್ನೆ ಮಾಡಿದವರನ್ನು ಸಾರ್ವಜನಿಕವಾಗಿ ವೈಯುಕ್ತಿಕವಾಗಿ ನಿಂದಿಸುವುದು ಸ್ವಚ್ಛ ರಾಜಕಾರಣವಲ್ಲ.”


ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ.!!

ಶಾಸಕರು ಮಹಾಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ಧಿಪಡಿಸುವ ಉತ್ಸಾಹ ಮೆರೆದಿದ್ದು ಭಕ್ತರಿಗೆ ಸಂತೋಷ ತಂದಿದೆ. ಆದರೆ ಅದರ ಹೆಸರಲ್ಲಿ ಅನೇಕ ಕಟ್ಟಡಗಳನ್ನು ಅಕ್ರಮವೆಂದು ತೆರವು ಮಾಡಲಾಗಿದೆ. “ನಮ್ಮ ಮನೆಯನ್ನು ನಾವು ಇಲ್ಲದಿದ್ದಾಗ ಬಲವಂತವಾಗಿ ಕೆಡವಲಾಗಿದೆ. ದೇವಸ್ಥಾನ ನೀಡಿದ ಜಾಗ ಅಕ್ರಮವಾಗುವುದಿಲ್ಲ ಎಂಬುದು ಶಾಸಕರಿಗೆ ತಿಳಿದಿರಬೇಕು,” ಎಂದು ರಾಜೇಶ್ ಬನ್ನೂರು ಆಕ್ರೋಶ ವ್ಯಕ್ತಪಡಿಸಿದರು.

“ಶಾಸಕರ ಅವಧಿಯಲ್ಲಿ ಒಂದೇ ಒಂದು ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ರಿಂಗ್‌ರೋಡ್‌ ಯೋಜನೆ ತಿರಸ್ಕೃತಗೊಂಡಿದೆ. ಬೊಳುವಾರು-ಪಡೀಲ್ ಡಬಲ್‌ರೋಡ್ ಕಾಮಗಾರಿ ಏನಾಯಿತು?” ಎಂದು ಪ್ರಶ್ನಿಸಿದರು

ಮಹಿಳಾ ಪೊಲೀಸ್ ಠಾಣೆ ಸ್ಥಳಾಂತರ ವಿವಾದ

ಮಹಿಳಾ ಪೊಲೀಸ್‌ ಠಾಣೆ ತೆರವು ಕುರಿತು ಶಾಸಕರ ಹೇಳಿಕೆಯನ್ನು ರಾಜೇಶ್ ಬನ್ನೂರು ತೀವ್ರವಾಗಿ ಪ್ರಶ್ನಿಸಿದರು. “ಗೃಹ ಇಲಾಖೆಯ ಅಧಿವೇಶನದಲ್ಲಿ ಮಹಿಳಾ ಪೊಲೀಸ್‌ ಠಾಣೆಯನ್ನು ಸ್ಥಳಾಂತರಿಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಹಾಗಿದ್ದರೆ ಶಾಸಕರು ಘೋಷಿಸಿದ 1 ಕೋಟಿ ರೂಪಾಯಿ ಅನುದಾನ ಏನಾಯಿತು? ಶಾಸಕರು ಮನವಿ ಮಾಡಲೇ ಇಲ್ಲವೆಂಬುದು ಸ್ಪಷ್ಟವಾಗಿದೆ,” ಎಂದರು.

“ಮಹಿಳಾ ಪೊಲೀಸ್‌ ಠಾಣೆಗೆ ಸರಕಾರದ ಪಹಣಿ ಇದೆ. ಸ.ನಂ. 78/8ರಲ್ಲಿ 0.08 ಎಕರೆ ಜಮೀನು ಪೊಲೀಸ್‌ ಅದೀಕ್ಷಕರ ಹೆಸರಿನಲ್ಲಿದೆ. ಹಲವಾರು ವರ್ಷಗಳಿಂದ ಕಟ್ಟಡ ಅಲ್ಲಿ ಅಸ್ತಿತ್ವದಲ್ಲಿದೆ. ಬ್ರಿಟಿಷ್ ಕಾಲದಿಂದಲೂ ಇರುವ ಆ ಪಾರಂಪರಿಕ ಕಟ್ಟಡವನ್ನು ತೆರವುಗೊಳಿಸುವುದು ಸುಲಭವಲ್ಲ. ಧಾರ್ಮಿಕ ಹಿನ್ನೆಲೆ ಹೊಂದಿರುವ ಈ ಕಟ್ಟಡವನ್ನು ಸ್ಥಳಾಂತರ ಮಾಡುವುದಾದರೂ ಕಾನೂನಿನ ಚೌಕಟ್ಟಿನಲ್ಲಿ ಮಾತ್ರ ಸಾಧ್ಯ. ಅಲ್ಲದೆ ಜಾತ್ರೆಯ ಸಂದರ್ಭ ದೇವಸ್ಥಾನದಿಂದ ಪೊಲೀಸ್ ಠಾಣೆಗೆ ವಿಶೇಷ ಗೌರವ ನೀಡುವ ಸಂಪ್ರದಾಯವೂ ಇದೆ,” ಎಂದರು.

ವ್ಯವಸ್ಥಾಪನಾ ಸಮಿತಿ ಶಾಸಕರ ಕೈಯಲ್ಲಿ?

ದೇವಸ್ಥಾನದ ಆಡಳಿತ ಮಂಡಳಿಯ ಕುರಿತು ಮಾತನಾಡಿದ ಅವರು – “ಧಾರ್ಮಿಕ ಕ್ಷೇತ್ರದಲ್ಲಿ ರಾಜಕೀಯ ಇರಬಾರದು. ಆದರೆ ಮಹಾಲಿಂಗೇಶ್ವರ ದೇವಸ್ಥಾನದ ಎಲ್ಲಾ ಕಾರ್ಯಗಳನ್ನು ಶಾಸಕರು ಕಂಟ್ರೋಲ್ ಮಾಡುತ್ತಿದ್ದಾರೆ. ನೇಮಕವಾದ ಅಧ್ಯಕ್ಷರು ಸಹ ಶಾಸಕರ ಮಾರ್ಗದರ್ಶನದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವುದು ಕಾಯ್ದೆಗೆ ವಿರುದ್ಧವಾಗಿದೆ,” ಎಂದು ಟೀಕಿಸಿದರು.

“ದೇವಸ್ಥಾನ ಧರ್ಮಕ್ಷೇತ್ರವಾಗಿರಲಿ, ಪ್ರವಾಸಿ ತಾಣವಲ್ಲ”

ಶಾಸಕರು ಮಹಾಲಿಂಗೇಶ್ವರ ದೇವಸ್ಥಾನವನ್ನು ಪ್ರವಾಸಿ ತಾಣ ಮಾಡಲು ಹೇಳಿರುವುದನ್ನೂ ವಿರೋಧಿಸಿದ ರಾಜೇಶ್ ಬನ್ನೂರು – “ಇದು ಪ್ರವಾಸಿ ತಾಣವಾಗದೆ ಶ್ರದ್ಧಾ ಕೇಂದ್ರ ಮತ್ತು ಧಾರ್ಮಿಕ ಕ್ಷೇತ್ರವಾಗಿರಬೇಕು. ಕ್ಷೇತ್ರಕ್ಕೆ ರೂ. 60 ಕೋಟಿಯ ಅನುದಾನ ಕೇಂದ್ರ ಸರ್ಕಾರದ ಪ್ರಸಾದಂ ಯೋಜನೆಯಡಿ ಬರಲಿದೆ ಎಂಬ ಅರಿವು ಶಾಸಕರಿಗೆ ಇರಬೇಕು,” ಎಂದು ಹೇಳಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!