‘ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ಅನನ್ಯಾ ಭಟ್‌ ಪ್ರಕರಣದ ದೂರುದಾರೆ ಸುಜಾತಾ ಭಟ್‌ ಅವರನ್ನು ಎರಡು ವಾರಗಳಿಂದ ಕೆಲವು ಮಾಧ್ಯಮದವರು ನಿರಂತರವಾಗಿ ಹಿಂಬಾಲಿಸಿ, ಹೇಳಿಕೆ ನೀಡಲು ಒತ್ತಾಯಿಸುತ್ತಿದ್ದಾರೆ. ಇದರಿಂದ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು’ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.

ನಾಗಲಕ್ಷ್ಮೀ ಚೌಧರಿ ಅವರು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸೂಚಿಸಿದ್ದಾರೆ.

ಈ ಬಗ್ಗೆ ಎಸ್‌ಐಟಿ ಮುಖ್ಯಸ್ಥರಿಗೆ ಪತ್ರ ಬರೆದಿರುವ ಅವರು, ‘ಕೆಲ ಮಾಧ್ಯಮಗಳು ಸುಜಾತಾ ಭಟ್‌ ಅವರ ತೇಜೋವಧೆ ಮಾಡುವ ರೀತಿಯಲ್ಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ತಡ ರಾತ್ರಿಯಲ್ಲಿ ಅವರ ಮನೆಗೆ ಹೋಗಿ ವಿಡಿಯೊ ಚಿತ್ರೀಕರಣ ಮಾಡಿ, ಕಾರಿನಲ್ಲಿ ಕೂರಿಸಿಕೊಂಡು ತನಿಖೆಯ ದಿಕ್ಕು ತಪ್ಪಿಸುವ ಹಾಗೆ ವೈರುಧ್ಯಗಳಿಂದ ಕೂಡಿದ ಹೇಳಿಕೆ ಪಡೆದು, ಅವರನ್ನು ಮಾನಸಿಕವಾಗಿ ಕುಗ್ಗಿಸುವ ವರದಿ ಪ್ರಸಾರ ಮಾಡಿವೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರು, ನಿರ್ಭೀತಿಯಿಂದ ದೂರನ್ನು ನೀಡಲು ಎಸ್‌ಐಟಿ ಅವಕಾಶ ನೀಡಬೇಕು. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಟ್ಟು, ಅವರಿಗೆ ರಕ್ಷಣೆ ನೀಡಬೇಕು. ಸುಜಾತಾ ಭಟ್‌ ಅವರು ಕೆಲ ಮಾಧ್ಯಮಗಳ ಒತ್ತಡದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿ ಹೋಗುವ ಸಾಧ್ಯತೆ ಇದೆ. ಈ ವಿಷಯವನ್ನು ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಕೂಡಲೇ ಸುಜಾತಾ ಭಟ್‌ ಅವರಿಗೆ ಭದ್ರತೆ ಒದಗಿಸಿ, ಅವರ ಅಹವಾಲು ಸಲ್ಲಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ವರದಿಯನ್ನು ಆಯೋಗಕ್ಕೆ ಸಲ್ಲಿಸಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!