ಹುಬ್ಬಳ್ಳಿ: ಅಭಿವ್ಯಕ್ತಿ ಸ್ವಾತಂತ್ರಕ್ಕೆ ನಾನು ಮತ್ತು ನಮ್ಮ ಸರ್ಕಾರ ಎಂದೆಂದಿಗೂ ಬದ್ಧವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇರಲೇಬೇಕು. ಅದನ್ನು ಮೊಟಕು ಮಾಡುವ ಕಾರ್ಯವನ್ನು ನಾವು ಎಂದೂ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ನಗರದ ಗೋಕುಲ್‌ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಸಂಜೆ ನೂತನವಾಗಿ ಆರಂಭವಾದ ‘ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್’ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ಊಹೆ ಮಾಡಿ ಸುದ್ದಿ ಮಾಡಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಪಡೆದು ಸುಳ್ಳು ಸುದ್ದಿ ಹರಡಬೇಡಿ. ಸುದ್ದಿ ಮಾಡುವಾಗ ವಿಷಯದ ಸತ್ಯಾಸತ್ಯತೆ ಅರಿತು, ಮೂಲ ಪರಿಶೀಲಿಸಿ, ನೈಜ ಸಂಗತಿಯನ್ನು ಜನರ ಮುಂದಿಡಬೇಕು. ಆ ಮೂಲಕ ಸಾರ್ವಜನಿಕರು ಮಾಧ್ಯಮಗಳ ಮೇಲಿಟ್ಟಿರುವ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಯೂಟ್ಯೂಬ್, ಡಿಜಿಟಲ್ ಮಾಧ್ಯಮಕ್ಕೆ ಲೈಸೆನ್ಸ್ ನೀಡುವ ಬಗ್ಗೆ ಮತ್ತು ಸುಳ್ಳು ಸುದ್ದಿ ತಡೆ ಕಾಯ್ದೆ ಜಾರಿಗೆ ಸರ್ಕಾರ ಪರಿಶೀಲನೆ ನಡೆಸಲಿದೆ.

ಜೊತೆಗೆ, ಸರ್ಕಾರ ತಾಲೂಕುಮಟ್ಟದ ಪತ್ರಕರ್ತರಿಗೆ ಪಾಸ್‌, ಆರೋಗ್ಯ ಸಂಜೀವಿನಿ, ನಿವೃತ್ತ ಪತ್ರಕರ್ತರಿಗೆ ಮಾಶಾಸನ ನೀಡುವ ಮೂಲಕ ಅನುಕೂಲ ಕಲ್ಪಿಸಿದೆ ಎಂದು ತಿಳಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯುನ್ಮಾನ ಮಾಧ್ಯಮ ಪತ್ರಕರ್ತರಿಗೆ ಸಾಂಕೇತಿಕವಾಗಿ ಅಪಘಾತ ವಿಮೆಯ ಸ್ಮಾರ್ಟ್ ಕಾರ್ಡ್ ವಿತರಿಸಲಾಯಿತು. ಈ ವೇಳೆ ಸಂಘದ ಲೋಗೋ ಅನಾವರಣ ಮಾಡಲಾಯಿತು. ಸಚಿವರಾದ ಸಂತೋಷ ಲಾಡ್‌, ಚಲುವರಾಯಸ್ವಾಮಿ, ಶಾಸಕರಾದ ಎನ್.ಎಚ್.ಕೋನರಡ್ಡಿ, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

Join WhatsApp Group
error: Content is protected !!