
ಬಂಟ್ವಾಳ: ಬಿ.ಸಿ ರಸ್ತೆಯ ಸೋಮಯಾಜಿ ಟೆಕ್ಸ್ಟೈಲ್ಸ್ ಅಂಗಡಿಯಲ್ಲಿ ನ. 19 ರಂದು ಸಂಜೆ ನಡೆದ ಕತ್ತಿ ದಾಳಿಯಲ್ಲಿ ಅಂಗಡಿ ಮಾಲೀಕ ಕೃಷ್ಣಕುಮಾರ್ ಸೋಮಯಾಜಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಅಂಗಡಿ ಮಾಲೀಕ ಸೋಮಯಾಜಿ ಅಂಗಡಿಯಲ್ಲಿ ಇದ್ದ ವೇಳೆ, ಬುರ್ಕಾ ಧರಿಸಿ ಗ್ರಾಹಕರಂತೆ ಬಂದ ಮಹಿಳೆ ಕತ್ತಿಯಿಂದ ದಾಳಿ ನಡೆಸಿದ್ದಾಳೆ. ದಾಳಿಯ ನಂತರ ಗಾಯಗೊಂಡ ಸೋಮಯಾಜಿ ಅಂಗಡಿಯಿಂದ ಹೊರ ಓಡಿದ್ದು, ಸ್ಥಳೀಯರು ಆಟೋದಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ.
ನಂತರ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ತನಿಖೆಯಲ್ಲಿ ದಾಳಿ ನಡೆಸಿದ ಮಹಿಳೆ ಕೃಷ್ಣಕುಮಾರ್ ಸೋಮಯಾಜಿಯವರ ಪತ್ನಿ ಜ್ಯೋತಿ ಕೆ.ಟಿ ಎಂಬುದು ತಿಳಿದು ಬಂದಿದೆ. ದಾಂಪತ್ಯ ಕಲಹದ ಹಿನ್ನೆಲೆಯಿಂದಲೇ ದಾಳಿ ನಡೆದಿದ್ದು, ಈ ಹಿಂದೆ ಕೂಡಾ ಅಂಗಡಿಗೆ ಬಂದು ಜೀವ ಬೆದರಿಕೆ ಹಾಕಿದ್ದರು
ಘಟನೆಯ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ 131/2025ರಡಿ ಬಿ.ಎನ್.ಎಸ್-2023ರ ಕಲಂ 118(1), 118(2), 351(3), 109 ಹಾಗೂ ಭಾರತೀಯ ಶಸ್ತ್ರ ಕಾಯ್ದೆ 1959ರ ಕಲಂ 2(1)(C), 27ರಂತೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.






