ಮಂಗಳೂರು, ಏ.19: ಮಂಗಳೂರು ನಗರದ ಜೆಪ್ಪಿನಮೊಗರು ಪ್ರದೇಶದಲ್ಲಿ ಬೃಹತ್ ಪ್ರಮಾಣದ MDMA ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ, ಕೆಎ-70 ಕೆ-3333 ಸಂಖ್ಯೆಯ ಬಜಾಜ್ ಫ್ರೀಡಂ ದ್ವಿಚಕ್ರ ವಾಹನವನ್ನು ತಪಾಸಣೆ ನಡೆಸಿದಾಗ, 465.8 ಗ್ರಾಂ ತೂಕದ MDMA ಮಾದಕ ವಸ್ತು ಪತ್ತೆಯಾಗಿದೆ. ಇದರ ಮೌಲ್ಯವನ್ನು ಸುಮಾರು ₹46,50,000 ಎಂದು ಅಂದಾಜಿಸಲಾಗಿದೆ.
ಬಂಧಿತರನ್ನು ಪರ್ವೇಜ್ ಅಲಿಯಾಸ್ ದಾವೂದ್ ಪರ್ವೇಜ್ (40), ತಂದೆ ಅಬ್ದುಲ್ ರಹಿಮಾನ್, ಪಿಲಾರು ಹೊಸಗದ್ದೆ ಮನೆ, ಪೆರ್ಮಾನ್ನೂರು, ಮಂಗಳೂರು ತಾಲೂಕು ಹಾಗೂ ನಜರತ್ ಅಲಿ (37), ತಂದೆ ಹಸೇನ್ (ಮೃತ), ಪಿಲಾರು, ಪೆರ್ಮಾನ್ನೂರು, ಮಂಗಳೂರು ತಾಲೂಕು ನಿವಾಸಿ ಎಂದು ಗುರುತಿಸಲಾಗಿದೆ.
ಪರ್ವೇಜ್ ಮಂಗಳೂರಿನ ಯುವ ಸಮುದಾಯ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಜಿಲ್ಲೆಯ ಹೊರಗಿನಿಂದ MDMA ತಂದು ನಗರದಲ್ಲಿ ಮಾರಾಟ ಮತ್ತು ಸರಬರಾಜು ಮಾಡಲು ಯತ್ನಿಸುತ್ತಿದ್ದನೆಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರ್ವೇಜ್ ವಿರುದ್ಧ ಪಾಂಡೇಶ್ವರ, ವಾಮಂಜೂರು, ಬಂದರು ಪೊಲೀಸ್ ಠಾಣೆಗಳು, ಬೆಂಗಳೂರಿನ ಅಮೃತಹಳ್ಳಿ ಹಾಗೂ ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಮಾದಕ ವಸ್ತು ಸಂಬಂಧಿತ ಪ್ರಕರಣಗಳು ದಾಖಲಾಗಿವೆ. ನಜರತ್ ಅಲಿ ಈತನಿಗೆ ಸಹಕಾರ ನೀಡುತ್ತಿದ್ದನೆಂದು ತಿಳಿದುಬಂದಿದೆ.
ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!