ಮಂಗಳೂರು, ಜೂನ್ 9: ಸುಮಾರು ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಇಬ್ಬರು ವಾರೆಂಟ್ ಆರೋಪಿಗಳನ್ನು ಬರ್ಕೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಬ್ದುಲ್ ಖಾದರ್ ತನ್ಸಿಪ್ @ ತಂಜಿ (ತೌಡಗೊಳಿ ಕ್ರಾಸ್, ನರಿಂಗಾಣ ಗ್ರಾಮ, ಬಂಟ್ವಾಳ) ಹಾಗೂ ಮೊಹಮ್ಮದ್ ರಾಜೀಕ್ (ಕುಂಡಾಲ ಹೌಸ್, ಅಡ್ಯಾರ್ ಕಣ್ಣೂರು, ಮಂಗಳೂರು) ಎಂದು ಗುರುತಿಸಲಾಗಿದೆ.
ಅಬ್ದುಲ್ ಖಾದರ್ ತನ್ಸಿಪ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ 2021ರ ಅಪರಾಧ ಸಂಖ್ಯೆ 18/2021ರಡಿ ಭಾರತೀಯ ದಂಡ ಸಂಹಿತೆಯ (IPC) ಕಲಂ 143, 147, 148, 353, 332, 504 ಹಾಗೂ 149ರಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಾರಣ ನ್ಯಾಯಾಲಯವು ಆತನ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿತ್ತು. ಅಲ್ಲದೆ ಆತನ ವಿರುದ್ಧ ಕೊಣಾಜೆ ಹಾಗೂ ಮಂಜೇಶ್ವರ ಠಾಣೆಗಳಲ್ಲಿಯೂ ಪ್ರಕರಣಗಳು ದಾಖಲಾಗಿವೆ.
ಇನ್ನೊಬ್ಬ ಆರೋಪಿಯಾದ ಮೊಹಮ್ಮದ್ ರಾಜೀಕ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 17/2021ರಡಿ IPC ಕಲಂ 143, 147, 148, 353, 332, 506, 307 ಹಾಗೂ 149ರಡಿ ಪ್ರಕರಣ ದಾಖಲಾಗಿತ್ತು. ಆತ ಕೂಡ ಸುಮಾರು ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿತ್ತು. ಆತನ ವಿರುದ್ಧ ಕಂಕನಾಡಿ, ಬೆಳ್ತಂಗಡಿ, ಪುತ್ತೂರು ಹಾಗೂ ಕದ್ರಿ ಠಾಣೆಗಳಲ್ಲಿಯೂ ವಿವಿಧ ಪ್ರಕರಣಗಳು ದಾಖಲಾಗಿವೆ.
ತಲೆಮರೆಸಿಕೊಂಡಿದ್ದ ಈ ಇಬ್ಬರು ಆರೋಪಿಗಳನ್ನು ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪತ್ತೆಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!