ಕಡಬ, ಜೂ. 9: ತಾಲ್ಲೂಕಿನ ನೂಜಿಬಾಳ್ತಿಲ ಗ್ರಾಮದ ನವವಿವಾಹಿತೆ ಆರ್ ಫೈನ್ ಮಹ್ರಾಬ್ (18) ನಾಪತ್ತೆ ಪ್ರಕರಣಕ್ಕೆ ತೆರೆ ಬಿದ್ದಿದ್ದು, ಅವರು ಶಿವಮೊಗ್ಗದಲ್ಲಿರುವ ತಮ್ಮ ತವರು ಮನೆಯಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.
ಮೇ 31ರಂದು ಮೊಹಮ್ಮದ್ ಆಶಿಕ್ ಅವರೊಂದಿಗೆ ವಿವಾಹವಾಗಿದ್ದ ಮಹ್ರಾಬ್, ಜೂನ್ 7ರ ನಸುಕಿನ ಜಾವ ಗಂಡನ ಮನೆಯಿಂದ ಚಿನ್ನಾಭರಣಗಳೊಂದಿಗೆ ಕಾಣೆಯಾಗಿದ್ದರು. ಈ ಕುರಿತು ಪತಿ ಆಶಿಕ್ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರ ತನಿಖೆ ವೇಳೆ ಯುವತಿ ಶಿವಮೊಗ್ಗದ ತವರು ಮನೆಗೆ ತಲುಪಿರುವುದು ತಿಳಿದುಬಂದಿದೆ. ಪ್ರಕರಣದ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಯುವತಿಯನ್ನು ಕಡಬ ಪೊಲೀಸ್ ಠಾಣೆಗೆ ಕರೆತರಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಯಾದ ಕೆಲವೇ ದಿನಗಳಲ್ಲಿ ಯುವತಿ ಮನೆಯಿಂದ ತೆರಳಲು ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ.







