ಪುತ್ತೂರು: ಮೈಸೂರಿನಲ್ಲಿ ನಡೆಯುವ ವಿಶ್ವಪ್ರಸಿದ್ದ ದಸರಾಗೆ ಈ ಬಾರಿ ಕಂಬಳ ನಡೆಸುವಂತೆ ಮತ್ತು ಅದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳ ವ್ಯವಸ್ಥೆ ಮಾಡುವಂತೆ ಶಾಸಕ ಅಶೋಕ್ ರೈ ಅವರಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕಂಬಳ ನಡೆಸುವ ಮೂಲಕ ಕಂಬಳ ಕ್ರೀಡೆಯನ್ನು ಜಗತ್ತಿಗೆ ಪರಿಚಯಿಸಿದ ಮತ್ತು ಯಶಶ್ವಿಯಾಗಿ ಕಂಬಳ ನಡೆಸಿದ ಖ್ಯಾತಿ ಅಶೋಕ್ ರೈ ಅವರಿಗಿದೆ. ಕಳೆದ ಬಾರಿ ಪುತ್ತೂರಿಗೆ ಬಂದಿದ್ದ ಡಿಕೆ ಶಿವಕುಮಾರ್ ರವರು ದಸರಾ ಕಂಬಳದ ಬಗ್ಗೆ ಮಾತನಾಡಿದ್ದರು‌.
ಇದೀಗ ಮುಖ್ಯಮಂತ್ರಿಯವರೇ ಸ್ವತ ಸೂಚನೆ ನೀಡಿದ್ದು ಈ ಬಾರಿ ಮೈಸೂರು ದಸರಾ ವೇಳೆ ಕಂಬಳ ನಡೆಯಲಿದೆ.
ಈಗಾಗಲೇ ಒಂದು ಸುತ್ತಿನ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಮೈಸೂರಿನ ಜಯಲಕ್ಷ್ಮೀ ಪುರಂನ ಪ್ರೀಮಿಯರ್ ಸ್ಟುಡಿಯೋ ಬಳಿ ಇರುವ ಸುಮಾರು 17 ಎಕ್ರೆ ಜಾಗದಲ್ಲಿ ಕಂಬಳ ನಡೆಯಲಿದೆ. ಅಕ್ಟೋಬರ್ ತಿಂಗಳ 18,19 ರಂದು ಎರಡು ದಿನ ಕಂಬಳ ನಡೆಯಲಿದೆ.

ಮೈಸೂರಿನಲ್ಲಿ ಸಭೆ
ಇಂದು ಕಂಬಳ ನಡೆಸುವ ಬಗ್ಗೆ ಸಿ ಎಂ ಸೂಚನೆಯಂತೆ ಮೈಸೂರಿನಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಸಭೆಯಲ್ಲಿ ಜಿಲ್ಲೆಯ ಕಂಬಳ ಪ್ರಮುಖರು ಭಾಗವಹಿಸಿದ್ದರು. ಎರಡನೇ ಹಂತದ ಸಭೆ ಮುಂದಿನ ಗುರುವಾರ ಮೈಸೂರಿನಲ್ಲಿ ನಡೆಯಲಿದ್ದು ಈ ಸಭೆಯಲ್ಲಿ ಶಾಸಕ ಅಶೋಕ್ ರೈ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಸಹಿತ ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಮೈಸೂರು ದಸರಾಗೆ ಕಂಬಳ ನಡೆಸುವಂತೆ ಕಳೆದ ಬಾರಿ ಡೆಪ್ಯುಟಿ ಸಿ ಎಂ ಆಗಿದ್ದ ಡಿಕೆಶಿಯವರು ಕೇಳಿಕೊಂಡಿದ್ದರು,ಬಳಿಕ ಕೊನೇ ಹಂತದಲ್ಲಿ ಕೈಬಿಡಲಾಗಿತ್ತು. ಈ ಬಾರಿ ಕಂಬಳ ನಡೆಸುವಂತೆ ಸಿ ಎಂ ಆಗಿರುವ ಡಿಕೆಶಿ ಸೂಚನೆ ನೀಡಿದ್ದಾರೆ. ಕಂಬಳ ಖಂಡಿತವಾಗಿಯೂ ನಡೆಯಲಿದೆ. ಜಾಗವನ್ನು ನಿಗಧಿಪಡಿಸಲಾಗಿದೆ. ಬೆಂಗಳೂರಿನ ಕಂಬಳದಂತೆ ಮೈಸೂರು ದಸರಾ ಕಂಬಳ ವಿಶ್ವ ವಿಖ್ಯಾತಿ ಪಡೆಯಲಿದ್ದು ತುಳು ನಾಡಿನ ಜನಪದ ಕ್ರೀಡೆಯೊಂದನ್ನು ಜಗತ್ತಿಗೆ ಪರಿಚಯಿಸಿದ ಹೆಮ್ಮೆ ನಮಗೆ ಸಿಗಲಿದೆ.

ಅಶೋಕ್ ರೈ ಶಾಸಕರು ಪುತ್ತೂರು

Leave a Reply

Your email address will not be published. Required fields are marked *

Join WhatsApp Group
error: Content is protected !!