ಬೆಳ್ಳಾರೆ: ಮನೆ ಸಮೀಪದ ಕೆರೆಯಲ್ಲಿ ಬಿದ್ದು ಇಬ್ಬರು ಅಪ್ರಾಪ್ತ ವಯಸ್ಸಿನ ಗಂಡು ಮಕ್ಕಳು ಮೃತಪಟ್ಟ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಮುರುಳ್ಯ ಗ್ರಾಮದ ಕಡೀರದಲ್ಲಿ ಶುಕ್ರವಾರ ನಡೆದಿದೆ.
ಕಡೀರ ನಿವಾಸಿ ವಸಂತ್ (41) ಅವರ ಐದು ವರ್ಷದ ಇಬ್ಬರು ಪುತ್ರರು ಮೃತಪಟ್ಟವರು. ವಸಂತ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು, ಶುಕ್ರವಾರ ಮಧ್ಯಾಹ್ನ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆತಂದಿದ್ದರು. ಬಳಿಕ ಸಂಜೆ ವೇಳೆ ದಂಪತಿ ಮಕ್ಕಳು ಮನೆಯಲ್ಲಿ ಇರುವುದಾಗಿ ಭಾವಿಸಿ ಸಮೀಪದ ತೋಟಕ್ಕೆ ಕೆಲಸಕ್ಕೆ ತೆರಳಿದ್ದರು.
ಕೆಲಸ ಮುಗಿಸಿ ತಾಯಿ ಮನೆಗೆ ಮರಳಿದಾಗ ಮಕ್ಕಳು ಕಾಣಿಸದ ಹಿನ್ನೆಲೆಯಲ್ಲಿ ದಂಪತಿ ಹಾಗೂ ಸ್ಥಳೀಯರು ಸುತ್ತಮುತ್ತ ಹುಡುಕಾಟ ನಡೆಸಿದರು. ಈ ವೇಳೆ ಮನೆ ಸಮೀಪದ ಕೆರೆಯಲ್ಲಿ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾದವು.
ಮಕ್ಕಳು ಆಟವಾಡುವ ಸಂದರ್ಭದಲ್ಲಿ ಕೆರೆಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಕುರಿತು ವಸಂತ್ ಅವರು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!