ಪುತ್ತೂರು: ಪುತ್ತೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಇದರಿಂದ ಸಾರ್ವಜನಿಕರು ಮತ್ತು ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸದಿದ್ದರೆ ಬಿಜೆಪಿ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ವಕ್ತಾರ ರಾಜೇಶ್ ಬನ್ನೂರು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ಒಂದು ವಾರದಿಂದ ಸಣ್ಣ ಪ್ರಮಾಣದ ಮಳೆಯಾದರೂ ಪದೇಪದೆ ವಿದ್ಯುತ್ ಕಡಿತಗೊಳ್ಳುತ್ತಿದೆ. ವಿದ್ಯುತ್ ಕಡಿತಗೊಂಡ ಬಳಿಕ ಪುನಃ ಸರಬರಾಜು ಯಾವಾಗ ಆರಂಭವಾಗುತ್ತದೆ ಎಂಬುದಕ್ಕೂ ಸ್ಪಷ್ಟತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.ವಿದ್ಯುತ್ ಪೂರೈಕೆಯನ್ನು ಶೀಘ್ರ ಮರುಸ್ಥಾಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಇದರಿಂದ ವ್ಯಾಪಾರಿಗಳು, ಸಾರ್ವಜನಿಕರು, ಬ್ಯಾಂಕ್‌ಗಳು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಸೇರಿದಂತೆ ವಿವಿಧ ಸೇವಾ ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಅಡಚಣೆ ಉಂಟಾಗುತ್ತಿದೆ. ಪದೇಪದೆ ವಿದ್ಯುತ್ ವ್ಯತ್ಯಯವಾಗುತ್ತಿರುವುದರಿಂದ ವ್ಯಾಪಾರಿಗಳಿಗೆ ಆರ್ಥಿಕ ನಷ್ಟವೂ ಉಂಟಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ಜನರ ಸಮಸ್ಯೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ವಿದ್ಯುತ್ ಪೂರೈಕೆಯನ್ನು ಸುಧಾರಿಸಬೇಕು. ಇಲ್ಲವಾದರೆ ಸಾರ್ವಜನಿಕರ ಪರವಾಗಿ ಬಿಜೆಪಿ ಉಗ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ರಾಜೇಶ್ ಬನ್ನೂರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!