ಸುಳ್ಯ, ಜು. 7: ದೇಶಾದ್ಯಂತ ‘ಭಾರತದ ಸೇತುವೆ ಮನುಷ್ಯ’ (Bridge Man of India) ಹಾಗೂ ‘ತೂಗು ಸೇತುವೆಗಳ ಸರದಾರ’ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ ಮುಂಜಾನೆ ನಿಧನರಾದರು.ಕೆಲ ದಿನಗಳ ಹಿಂದೆ ಉತ್ತರಾಖಂಡದ ಪವಿತ್ರ ಕ್ಷೇತ್ರಗಳ ಪ್ರವಾಸ ಕೈಗೊಂಡಿದ್ದ ಅವರು, ಬಳಿಕ ತೀವ್ರ ಹೃದಯ ಸಂಬಂಧಿ ಸಮಸ್ಯೆಯಿಂದ ಅಸ್ವಸ್ಥಗೊಂಡಿದ್ದರು. ಚಿಕಿತ್ಸೆಗಾಗಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ ಕೊನೆಯುಸಿರೆಳೆದರು.ಮೃತರು ಮೂವರು ಮಕ್ಕಳನ್ನು ಅಗಲಿದ್ದಾರೆ. ಅವರ ಪತ್ನಿ ಉಷಾ ಅವರು ಈ ಹಿಂದೆ ನಿಧನರಾಗಿದ್ದರು.ಡಾ. ಗಿರೀಶ್ ಭಾರದ್ವಾಜ್ ಅವರು ದೇಶದ ವಿವಿಧ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ತೂಗು ಸೇತುವೆಗಳನ್ನು ನಿರ್ಮಿಸುವ ಮೂಲಕ ಜನಜೀವನಕ್ಕೆ ಹೊಸ ಸಂಪರ್ಕ ಕಲ್ಪಿಸಿದ್ದರು. ನದಿ, ತೊರೆಗಳಿಂದ ಸಂಪರ್ಕ ಕಡಿತಗೊಂಡಿದ್ದ ಅನೇಕ ಹಳ್ಳಿಗಳಿಗೆ ಅವರು ನಿರ್ಮಿಸಿದ ಸೇತುವೆಗಳು ವರದಾನವಾಗಿದ್ದವು. ಗ್ರಾಮೀಣ ಭಾರತದ ಅಭಿವೃದ್ಧಿಗೆ ಸಲ್ಲಿಸಿದ ಅಪೂರ್ವ ಸೇವೆ ಹಾಗೂ ತಾಂತ್ರಿಕ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನದಿಂದ ಗ್ರಾಮೀಣ ಅಭಿವೃದ್ಧಿ ಕ್ಷೇತ್ರವು ಅಪರೂಪದ ಸಮಾಜಮುಖಿ ಇಂಜಿನಿಯರ್‌ರನ್ನು ಕಳೆದುಕೊಂಡಂತಾಗಿದೆ.







