ಪುತ್ತೂರು: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ, ಗಿಟ್ಟರ್ಸ್ ಫ್ಯಾನ್ಸಿ ಎದುರು ರಿಕ್ಷಾ ಪಾರ್ಕಿಂಗ್ ಪಕ್ಕದಲ್ಲಿರುವ ಡಾ. ಕೆ. ಶಿವರಾಮ ಕಾರಂತ ಸರ್ಕಾರಿ ಪ್ರೌಢಶಾಲೆಯ ಆವರಣ ಗೋಡೆ ಭಾನುವಾರ ರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ಕುಸಿದು ಬಿದ್ದಿದೆ.ಕೆಲ ದಿನಗಳ ಹಿಂದೆಯೇ ಗೋಡೆ ವಾಲಿ ಅಪಾಯದ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ್ದ ಪುತ್ತೂರು ನಗರಸಭೆ ಮುನ್ನೆಚ್ಚರಿಕಾ ಕ್ರಮವಾಗಿ ಎಚ್ಚರಿಕೆ ಫಲಕ ಅಳವಡಿಸಿ, ಸಾರ್ವಜನಿಕರು ಗೋಡೆಯ ಸಮೀಪ ಸಂಚರಿಸದಂತೆ ಸೂಚಿಸಿತ್ತು.ಘಟನೆ ರಾತ್ರಿ ಸಂಭವಿಸಿದ್ದರಿಂದ ಹಾಗೂ ಭಾನುವಾರದ ರಜೆಯ ಹಿನ್ನೆಲೆಯಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇರದ ಕಾರಣ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ.ಕಳೆದ ಕೆಲವು ದಿನಗಳಿಂದ ಪುತ್ತೂರು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಭಾನುವಾರ ಗಾಳಿ ಸಹಿತ ಧಾರಾಕಾರ ಮಳೆಯೂ ಸುರಿದಿದೆ.ಇದೇ ವೇಳೆ ಬೆದ್ರಾಳ ಸಮೀಪ ರಸ್ತೆ ಮೇಲೆ ಮರ ಉರುಳಿಬಿದ್ದ ಪರಿಣಾಮ ವಿದ್ಯುತ್ ತಂತಿಗಳು ತುಂಡಾಗಿ, ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು.







