ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಿತಿ ವತಿಯಿಂದ ಆಯೋಜಿಸಲಾಗಿರುವ ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಮುಕ್ರಂಪಾಡಿಯ ಸುಭದ್ರಾ ಕಲಾಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಹಿಂದೂ ಸಮಾಜದ ಏಕತೆ ಮತ್ತು ಮಾತೆಯರ ಒಗ್ಗೂಡುವಿಕೆಯನ್ನು ಉದ್ದೇಶಿಸಿ ಪ್ರತಿ ವರ್ಷದಂತೆ ಈ ಬಾರಿಯೂ ವರಮಹಾಲಕ್ಷ್ಮಿ ಪೂಜೆಯನ್ನು ಆಯೋಜಿಸಲಾಗುತ್ತಿದೆ ಎಂದರು. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹಿಂದೂ ಸಮಾಜದ ಕೇಂದ್ರಬಿಂದುವಾಗಿರುವ ಮಾತೆಯರು ಹಾಗೂ ಸಹೋದರಿಯರನ್ನು ಸಂಘಟನಾತ್ಮಕವಾಗಿ ಬಲಿಷ್ಠಗೊಳಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ತಿಳಿಸಿದರು.ಮೊದಲ ವರ್ಷದ ಪೂಜೆಯಲ್ಲಿ 2,512 ಸೇವೆಗಳು ನಡೆದಿದ್ದು, ಎರಡನೇ ವರ್ಷದಲ್ಲಿ ಅದು 5,471ಕ್ಕೆ ಏರಿಕೆಯಾಗಿದೆ. ಈ ಬಾರಿ 10 ಸಾವಿರಕ್ಕೂ ಹೆಚ್ಚು ಸೇವೆಗಳು ನಡೆಯಲಿವೆ ಎಂಬ ವಿಶ್ವಾಸವಿದ್ದು, ಈ ಸನಾತನ ಧಾರ್ಮಿಕ ಕಾರ್ಯಕ್ಕೆ ಪುತ್ತೂರಿನ ಸಮಸ್ತ ಹಿಂದೂ ಬಾಂಧವರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಪ್ರಧಾನ ಕಾರ್ಯದರ್ಶಿ ಪ್ರೇಮ್ ರಾಜ್ ಆರ್ಲಪದವು, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ವೀಣಾ ಬಲ್ಲಾಳ್, ಪ್ರಧಾನ ಕಾರ್ಯದರ್ಶಿಗಳಾದ ಸ್ವಯಂಪ್ರಭಾ ಭಟ್, ಪವಿತ್ರಾ ದೊಡ್ಡಡ್ಕ, ಪ್ರತಿಭಾ ಒಕುಣ್ಣಾಯ, ರಜತಾ ಭಟ್, ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿಗಳು, ನಿರ್ದೇಶಕರು ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!