ಕಡಬ: ಬ್ಯಾಂಕ್‌ನಲ್ಲಿ ಹೆಚ್ಚು ತೂಕವಿರುವಂತೆ ತಯಾರಿಸಿದ ಚಿನ್ನಾಭರಣಗಳನ್ನು ಅಡವಿಟ್ಟು ಹಣ ಪಡೆದು ಮೋಸ ಮಾಡಲು ಯತ್ನಿಸಿದ ಆರೋಪದ ಮೇಲೆ ಕಡಬ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಜುಲೈ 3ರಂದು ಸಂಜೆ ಕಡಬ ಪೇಟೆಯಲ್ಲಿ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದರು. ಈ ವೇಳೆ ಅವರು ಬ್ಯಾಂಕ್‌ನಲ್ಲಿ ಸುಮಾರು 120 ಗ್ರಾಂ ಚಿನ್ನಾಭರಣವನ್ನು ಅಡವಿಡಲು ಬಂದಿರುವುದಾಗಿ ತಿಳಿಸಿದ್ದಾರೆ.ಅವರ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆತಂದಾಗ, ಉಪ್ಪಿನಂಗಡಿ ನಿವಾಸಿ ಮಹಮ್ಮದ್ ಫಾಯಿಝ್ (20) ಹಾಗೂ ಬಂಟ್ವಾಳ ಕಸಬಾ ನಿವಾಸಿ ಮೊಹಮ್ಮದ್ ಮುರ್ಷೀದ್ (45) ಎಂದು ಗುರುತಿಸಲಾಗಿದೆ.ಅವರ ಬಳಿಯಿದ್ದ ಚಿನ್ನಾಭರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಅವರು ಸಲ್ಲಿಸದಿದ್ದು, ವಿಚಾರಣೆ ವೇಳೆ ಚಿನ್ನಾಭರಣವನ್ನು ಕೃತಕವಾಗಿ ಹೆಚ್ಚು ತೂಕ ಬರುವಂತೆ ಮಾಡಿ ಬ್ಯಾಂಕ್‌ನಲ್ಲಿ ಅಡವಿಟ್ಟು ಹಣ ಪಡೆದು ಮೋಸ ಮಾಡುವ ಉದ್ದೇಶ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 83/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 318(4) ಹಾಗೂ 62ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.







