ಪುತ್ತೂರು: ಕೆಲಸಕ್ಕೆ ತೆರಳುತ್ತಿದ್ದ ವೇಳೆ ತನ್ನ ಪರಿಚಿತ ಯುವಕ ಚಾಕು ಹಿಡಿದು ನಿಂತಿದ್ದನ್ನು ಕಂಡು ಆತ ಹಾಗೂ ಆತನ ಸ್ನೇಹಿತರು ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಶಂಕಿಸಿ ಯುವತಿಯೊಬ್ಬರು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪೊಲೀಸರ ಮಾಹಿತಿ ಪ್ರಕಾರ, ಜು. 8ರಂದು ಬೆಳಿಗ್ಗೆ ಸುಮಾರು 6.45ಕ್ಕೆ ಕೆಲಸಕ್ಕೆ ತೆರಳುತ್ತಿದ್ದ ಯುವತಿಗೆ, ತನ್ನೊಂದಿಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಸೊಹೈಲ್ ಎಂಬಾತ ಚಾಕು ಹಿಡಿದು ನಿಂತಿರುವುದು ಕಂಡುಬಂದಿದೆ. ಬಳಿಕ ಆತ ಹಾಗೂ ಆತನೊಂದಿಗೆ ಇದ್ದ ನಾಲ್ವರು ಸ್ನೇಹಿತರು ವಾಹನದಲ್ಲಿ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಭಾವಿಸಿ ಯುವತಿ ದೂರು ನೀಡಿದ್ದು, ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣದ ತನಿಖೆ ವೇಳೆ ವಿಚಾರಣೆಗೆ ಒಳಪಡಿಸಿದ ಯುವಕರು, ಬೇಕರಿಯಿಂದ ಬ್ರೆಡ್ ಖರೀದಿಸಿ ಅದಕ್ಕೆ ಚೀಸ್ ಹಚ್ಚಲು ಅಲ್ಲಿಯೇ ಚಾಕು ಪಡೆದಿದ್ದೆವು. ಬಳಿಕ ಅದನ್ನು ಬೇಕರಿಗೆ ಹಿಂತಿರುಗಿಸಲು ಹೋಗುತ್ತಿದ್ದೆವು. ಯಾವುದೇ ಅಪರಾಧಿಕ ಕೃತ್ಯದಲ್ಲಿ ತೊಡಗಿರಲಿಲ್ಲ. ನಂತರ ಎಂದಿನಂತೆ ಜಿಮ್‌ಗೆ ತೆರಳಿದ್ದೆವು ಎಂದು ಪೊಲೀಸರಿಗೆ ತಿಳಿಸಿದ್ದಾರೆ.ಇದೇ ವೇಳೆ, ಘಟನೆಯ ನೈಜ ಸಂಗತಿಗಳು ತಿಳಿದಿದ್ದರೂ ಧಾರ್ಮಿಕ ದ್ವೇಷದ ಉದ್ದೇಶದಿಂದ ತಮ್ಮ ವಿರುದ್ಧ ಯುವತಿಯ ಮೂಲಕ ಸುಳ್ಳು ಪ್ರಕರಣ ದಾಖಲಿಸಲು ಯತ್ನಿಸಲಾಗಿದೆ ಎಂದು ಆರೋಪಿಸಿ ಇತರರ ವಿರುದ್ಧ ಯುವಕರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಹರಡುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!