ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ತಮಿಳುನಾಡಿನ ಕೊಯಂಬತ್ತೂರು ಮೂಲದ ಜಯಕುಮಾರ್ ವಿ. (55) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ ಮೂರು ಹಾಗೂ ಉಪ್ಪಿನಂಗಡಿ ಠಾಣೆಯ ಎರಡು ಸೇರಿದಂತೆ ಜಿಲ್ಲೆಯ ಐದು ಕಳ್ಳತನ ಪ್ರಕರಣಗಳ ತನಿಖೆ ವೇಳೆ ಆರೋಪಿಯನ್ನು ಜುಲೈ 8ರಂದು ವಶಕ್ಕೆ ಪಡೆಯಲಾಗಿದೆ. ಆರೋಪಿಯಿಂದ ಕಬ್ಬಿಣದ ಸಲಾಕೆ, ಸ್ಕ್ರೂ ಡ್ರೈವರ್, ಬ್ಯಾಗ್ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ವಿಚಾರಣೆ ವೇಳೆ, ದಕ್ಷಿಣ ಕನ್ನಡ ಜಿಲ್ಲೆಯ ಐದು ಪ್ರಕರಣಗಳ ಜೊತೆಗೆ ಮಂಗಳೂರು ಸುರತ್ಕಲ್ ಠಾಣೆಯ ಒಂದು ಪ್ರಕರಣ, ಕೇರಳದ ವಿವಿಧ ಪೊಲೀಸ್ ಠಾಣೆಗಳ ನಾಲ್ಕು ಪ್ರಕರಣಗಳು ಹಾಗೂ ಬೆಂಗಳೂರಿನ ಒಂದು ಪ್ರಕರಣ ಸೇರಿ ಒಟ್ಟು 11 ಪ್ರಕರಣಗಳಲ್ಲಿ ಆರೋಪಿಯ ಭಾಗವಹಿಸುವಿಕೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬೆಳ್ತಂಗಡಿ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ರವಿ ಬಿ.ಎಸ್. ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಾಗರಾಜ್ ಅವರ ನೇತೃತ್ವದ ವಿಶೇಷ ತನಿಖಾ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.







