ಮಂಗಳೂರು: ಉರ್ವ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನ ಪ್ರಕರಣವನ್ನು ಭೇದಿಸಿರುವ ಮಂಗಳೂರು ನಗರ ಪೊಲೀಸರು ನೇಪಾಳ ಮೂಲದ ಕುಖ್ಯಾತ ಮನೆಗಳ್ಳರ ಜಾಲದ ಮೂವರು ಸದಸ್ಯರನ್ನು ಬಂಧಿಸಿದ್ದು, ಅವರಿಂದ ಸುಮಾರು ₹10 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಜು.11ರಂದು ಉರ್ವ ಮಾರ್ಕೆಟ್ ಸಮೀಪದ ಮಠದಕಣಿಯ ನಿವಾಸಿಗಳು ಮನೆಗೆ ಬೀಗ ಹಾಕಿ ಹೊರಗಡೆ ತೆರಳಿದ್ದ ವೇಳೆ, ಕಳ್ಳರು ಮನೆಯ ಹಿಂಬಾಗಿಲು ಒಡೆದು ಸುಮಾರು 64 ಗ್ರಾಂ ಚಿನ್ನಾಭರಣ ಹಾಗೂ ₹25 ಸಾವಿರ ನಗದು ಸೇರಿ ₹8.57 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದರು. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ಕೈಗೊಂಡ ಬರ್ಕೆ ಠಾಣೆ ಪೊಲೀಸರು ಐದು ದಿನಗಳಲ್ಲೇ ಕಾರ್ಯಾಚರಣೆ ನಡೆಸಿ ಜು.17ರ ಮುಂಜಾನೆ ಬೋಳೂರಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದರು. ಬಂಧಿತರಿಂದ ಕಳವಾಗಿದ್ದ ಚಿನ್ನಾಭರಣಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದ್ದು, ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ 790 ಗ್ರಾಂ ಬೆಳ್ಳಿ ಆಭರಣಗಳನ್ನೂ ವಶಕ್ಕೆ ಪಡೆಯಲಾಗಿದೆ.ತನಿಖೆ ವೇಳೆ ಆರೋಪಿಗಳು ಈ ಹಿಂದೆ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನ ಯತ್ನ ಪ್ರಕರಣದಲ್ಲೂ ಭಾಗಿಯಾಗಿದ್ದುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಬೆಂಗಳೂರು, ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ವಿವಿಧೆಡೆ 15ಕ್ಕೂ ಹೆಚ್ಚು ಮನೆಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ತಮಿಳುನಾಡು, ದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲೂ ಇವರ ವಿರುದ್ಧ ಪ್ರಕರಣಗಳಿರುವ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.ಬಂಧಿತರು ತಿಲಕ್ ಕುಮಾರ್ ಖಡ್ಕ (36), ಅಶೋಕ್ ರಾಜ್ ಅಲಿಯಾಸ್ ಅಶೋಕ್ ಸಿಂಗ್ ಠಾಕುರಿ (33) ಹಾಗೂ ದಿಪೆಂದರ್ ರಸೈಲಿ (25). ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!