ಸುಳ್ಯ: ಕಲ್ಪವೃಕ್ಷ ಎಂದೇ ಕರೆಯಲ್ಪಡುವ ತೆಂಗಿನ ಮರ ಏರಿ ಕಳೆದ ಎರಡು ದಶಕಗಳಿಂದ ರೈತರು ಹಾಗೂ ಸಾರ್ವಜನಿಕರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಕಳಂಜ ಗ್ರಾಮದ ಅಚ್ಚುತ ನಾಯಕ್ ಕಿಲಂಗೋಡಿಯವರು ತಮ್ಮ ಕಾಯಕನಿಷ್ಠೆ ಮತ್ತು ಸೇವೆಯಿಂದ ಜಿಲ್ಲಾಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.ಆಕ್ಸಿಸ್ ಬ್ಯಾಂಕ್ ಹಾಗೂ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ವತಿಯಿಂದ ನೀಡಲಾಗುವ ಜಿಲ್ಲಾಮಟ್ಟದ ‘ಸೇವಾರತ್ನ’ ಪ್ರಶಸ್ತಿಗೆ ಅಚ್ಚುತ ನಾಯಕ್ ಕಿಲಂಗೋಡಿಯವರನ್ನು ಆಯ್ಕೆ ಮಾಡಲಾಗಿದೆ. ಅ.9ರಂದು ಸಂಜೆ 4.30ಕ್ಕೆ ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ತೆಂಗಿನ ಮರವೇರುವುದು ಅಪಾಯಭರಿತ ಕಾಯಕವಾಗಿದ್ದು, ಮರದ ಎತ್ತರ, ಗಾಳಿಯ ವೇಗ ಹಾಗೂ ಹವಾಮಾನ ವೈಪರೀತ್ಯಗಳ ನಡುವೆಯೂ ಮರದ ತುದಿಗೆ ಏರಿ ತೆಂಗಿನಕಾಯಿ ಕೊಯ್ಯಲು ಧೈರ್ಯ, ದೈಹಿಕ ಸಾಮರ್ಥ್ಯ, ಕೌಶಲ್ಯ ಮತ್ತು ಅನುಭವ ಅಗತ್ಯ. ಇಂತಹ ಸವಾಲಿನ ಕಾಯಕವನ್ನು ಅಚ್ಚುತ ನಾಯಕ್ ಅವರು ಕಳೆದ 20 ವರ್ಷಗಳಿಂದ ಪ್ರಾಮಾಣಿಕತೆ ಮತ್ತು ಕಾಯಕನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ.ಕಳಂಜ ಗ್ರಾಮಕ್ಕೆ ಮಾತ್ರ ಸೀಮಿತವಾಗದೆ ಸುಳ್ಯ ತಾಲೂಕು ಸೇರಿದಂತೆ ಹೊರ ತಾಲೂಕುಗಳ ವಿವಿಧ ಪ್ರದೇಶಗಳಿಗೆ ತೆರಳಿ ರೈತರು ಮತ್ತು ಸಾರ್ವಜನಿಕರ ತೆಂಗಿನ ಮರಗಳಿಂದ ತೆಂಗಿನಕಾಯಿ ಕೊಯ್ದು ನೀಡುವ ಸೇವೆಯನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ. ಗ್ರಾಮೀಣ ಕೃಷಿಕರಿಗೆ ಅಗತ್ಯವಾಗಿರುವ ಈ ಸೇವೆಯನ್ನು ಯಾವುದೇ ಪ್ರಚಾರದ ನಿರೀಕ್ಷೆಯಿಲ್ಲದೆ ನಡೆಸುತ್ತಿರುವುದು ಅವರ ವಿಶೇಷತೆ.ಮೌನ ಸಾಧಕರ ಸೇವೆಗೆ ಮತ್ತೊಂದು ಗೌರವಅಚ್ಚುತ ನಾಯಕ್ ಅವರ ಸೇವೆಯನ್ನು ಈಗಾಗಲೇ ಹಲವು ಸಂಸ್ಥೆಗಳು ಗುರುತಿಸಿವೆ. ರೋಟರಿ ಕ್ಲಬ್ ಬೆಳ್ಳಾರೆ ವತಿಯಿಂದ 2018–19ನೇ ಸಾಲಿನಲ್ಲಿ ಅವರನ್ನು ಗೌರವಿಸಲಾಗಿತ್ತು. 2025ರಲ್ಲಿ ಜೆಸಿಐ ಬೆಳ್ಳಾರೆ ಸಂಸ್ಥೆಯು ಅವರ ನಿರಂತರ ಶ್ರಮವನ್ನು ಗುರುತಿಸಿ ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು.ಕಳೆದ 20 ವರ್ಷಗಳಿಂದ ತೆಂಗಿನ ಮರದ ತುದಿಯಲ್ಲಿ ಬೆವರು ಸುರಿಸಿ ರೈತರು ಮತ್ತು ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿರುವ ಅಚ್ಚುತ ನಾಯಕ್ ಅವರ ಕಾಯಕನಿಷ್ಠೆ ಗ್ರಾಮೀಣ ಶ್ರಮಜೀವಿಗಳ ಪರಿಶ್ರಮದ ಪ್ರತೀಕವಾಗಿದೆ. ಇದೀಗ ದೊರೆಯುತ್ತಿರುವ ‘ಸೇವಾರತ್ನ’ ಪ್ರಶಸ್ತಿ ಅವರ ಎರಡು ದಶಕಗಳ ನಿರಂತರ ಸೇವೆಗೆ ಸಂದ ಸಾರ್ಥಕ ಗೌರವವಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!