ಪುತ್ತೂರು: ನ್ಯಾಯಾಲಯದ ವಿಚಾರಣೆ ವೇಳೆ ಪೊಲೀಸರ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದ ಆರೋಪಿಗೆ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಲಯವು 2 ವರ್ಷಗಳ ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಅ.5ರಂದು ಆದೇಶಿಸಿದೆ.ಪುತ್ತೂರು ಸಿರಿ ಬಾಗಿಲು ನಿವಾಸಿ ಜಯೇಶ್ ಅಲಿಯಾಸ್ ಜಯೇಶ್ ಕಾಂತ್ ಎಸ್., ಶಾಹಿರ್ ಅಲಿಯಾಸ್ ಶಾಕಿರ್ (41) ಶಿಕ್ಷೆಗೆ ಗುರಿಯಾದ ಆರೋಪಿ.ಉಪ್ಪಿನಂಗಡಿ ಪೊಲೀಸ್ ಠಾಣೆಯ ಅ.ಕ್ರ. 120/2008ರಲ್ಲಿ ಕಲಂ 450, 302, 201 ಐಪಿಸಿ ಪ್ರಕರಣದ ಆರೋಪಿಯಾಗಿದ್ದ ಈತನನ್ನು 2016ರ ಏಪ್ರಿಲ್ 5ರಂದು ಮಂಗಳೂರು ಕಾರಾಗೃಹದಿಂದ ವಿಚಾರಣೆಗಾಗಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ನ್ಯಾಯಾಲಯದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಆರೋಪಿ ಏಕಾಏಕಿ ಪೊಲೀಸರ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದ.ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 91/2016, ಕಲಂ 224 ಐಪಿಸಿ ಅಡಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ನಡೆಸಿದ ಅಂದಿನ ಪುತ್ತೂರು ನಗರ ಠಾಣೆಯ ಉಪನಿರೀಕ್ಷಕ ಖಾದರ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಕಾನೂನು ಅಭಿಯೋಜಕ ಮನೋಜ್ ಕುಮಾರ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣಪುರ್ ಅವರು ಆರೋಪಿಗೆ ಎರಡು ವರ್ಷಗಳ ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!