ಪುತ್ತೂರು: ತುಳುನಾಡಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ವಿಶಿಷ್ಟ ಜಾನಪದ ಕಲೆಯಾದ ಹುಲಿವೇಷ ಕುಣಿತವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ವಿಜಯ ಸಾಮ್ರಾಟ್ ಪುತ್ತೂರು ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ‘ಪುತ್ತೂರುದ ಪಿಲಿಗೊಬ್ಬು’ ಸ್ಪರ್ಧೆಯ ನಾಲ್ಕನೇ ಆವೃತ್ತಿ ಅ. 17ರಂದು ಶನಿವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ. ಸ್ಪರ್ಧೆಯೊಂದಿಗೆ ಅ. 17 ಮತ್ತು 18ರಂದು ಎರಡು ದಿನಗಳ ಕಾಲ ‘ಪುತ್ತೂರು ಫುಡ್ ಫೆಸ್ಟ್’ ಕೂಡ ನಡೆಯಲಿದ್ದು, ಜಿಲ್ಲೆಯ ಒಂಬತ್ತು ಪ್ರಖ್ಯಾತ ಹುಲಿವೇಷ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ.ಈ ಕುರಿತು ಗುರುವಾರ ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯ ಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಹಾಗೂ ಪಿಲಿಗೊಬ್ಬು ಸಮಿತಿಯ ಗೌರವಾಧ್ಯಕ್ಷ ಸಹಜ್ ರೈ ಬಳಜ್ಜ, ಕಳೆದ ಮೂರು ವರ್ಷಗಳಿಂದ ದೇವರಮಾರು ಗದ್ದೆಯಲ್ಲಿ ಪಿಲಿಗೊಬ್ಬು ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ದೇವರ ಹಾಗೂ ಜನರ ಆಶೀರ್ವಾದದಿಂದ ಈ ಬಾರಿ ನಾಲ್ಕನೇ ವರ್ಷದ ಕಾರ್ಯಕ್ರಮವನ್ನು ಮತ್ತಷ್ಟು ವಿಜೃಂಭಣೆಯಿಂದ ನಡೆಸಲು ಸಿದ್ಧತೆ ಮಾಡಲಾಗಿದೆ ಎಂದು ತಿಳಿಸಿದರು.ಪ್ರಥಮ ಬಹುಮಾನ ₹4 ಲಕ್ಷಈ ಬಾರಿ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಕಳೆದ ವರ್ಷಕ್ಕಿಂತ ಹೆಚ್ಚಿನ ನಗದು ಬಹುಮಾನ ನೀಡಲಾಗುತ್ತಿದೆ. ಪ್ರಥಮ ಬಹುಮಾನವಾಗಿ ₹4 ಲಕ್ಷ, ದ್ವಿತೀಯ ಬಹುಮಾನವಾಗಿ ₹3 ಲಕ್ಷ ಹಾಗೂ ತೃತೀಯ ಬಹುಮಾನವಾಗಿ ₹2 ಲಕ್ಷ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೂ ₹60 ಸಾವಿರ ಗೌರವ ಸಂಭಾವನೆ ನೀಡಲಾಗುವುದು.ಸಮಗ್ರ ತಂಡ ಪ್ರಶಸ್ತಿ, ಸಮಗ್ರ ಶಿಸ್ತಿನ ತಂಡ, ಉತ್ತಮ ತಾಸೆ, ಉತ್ತಮ ಬಣ್ಣ ಹಾಗೂ ಉತ್ತಮ ಧರಣಿ ಮಂಡಲ ಕುಣಿತ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಬಹುಮಾನಗಳಿವೆ. ವೈಯಕ್ತಿಕ ವಿಭಾಗದಲ್ಲಿ ಕಪ್ಪು ಹುಲಿ, ಮರಿ ಹುಲಿ, ಪುತ್ತೂರುದ ಹುಲಿ, ಮುಡಿ ಹಾರಿಸುವುದು ಹಾಗೂ ನಾಣ್ಯ ತೆಗೆಯುವುದಕ್ಕೆ ವಿಶೇಷ ಬಹುಮಾನ ನೀಡಲಾಗುತ್ತದೆ. ಪಂದ್ಯಶ್ರೇಷ್ಠ ‘ಪುತ್ತೂರುದ ಪಿಲಿ’ ಪ್ರಶಸ್ತಿಗೆ ₹10 ಸಾವಿರ ನಗದು ಬಹುಮಾನದೊಂದಿಗೆ ಎಲ್‌ಇಡಿ ಟಿವಿ ಅಥವಾ ಮೊಬೈಲ್ ನೀಡಲಾಗುವುದು.ಪ್ರತಿ ತಂಡದಲ್ಲಿ 15 ಹುಲಿವೇಷಧಾರಿಗಳು ಭಾಗವಹಿಸಲಿದ್ದು, ಕಲಾ ಪ್ರದರ್ಶನಕ್ಕೆ 22 ನಿಮಿಷ ಹಾಗೂ ಹೆಚ್ಚುವರಿಯಾಗಿ ಎರಡು ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಹುಲಿವೇಷ ಕ್ಷೇತ್ರದಲ್ಲಿ ಅನುಭವ ಹೊಂದಿರುವ ನವನೀತ್ ಶೆಟ್ಟಿ, ಟೈಗರ್ ಕ್ಯಾಂಪ್ ರಾಜ, ಸತೀಶ್ ಬಜಾರ್ ಹಾಗೂ ಗಿರೀಶ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ ಎಂದು ಸಹಜ್ ರೈ ತಿಳಿಸಿದರು.ಎಡನೀರು ಶ್ರೀಗಳಿಂದ ಚಾಲನೆಅ. 17ರಂದು ಬೆಳಗ್ಗೆ 10.30ಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಸರಸ್ವತಿ ಶ್ರೀಪಾದಂಗಳವರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಜೆ. ಗೌಡ, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.ಸೋನು ಸೂದ್, ಪೃಥ್ವಿ ಅಂಬಾರ್ ಸಹಿತ ತಾರೆಯರ ಆಗಮನಕಾರ್ಯಕ್ರಮಕ್ಕೆ ಬಾಲಿವುಡ್ ನಟ ಹಾಗೂ ಸಮಾಜಸೇವಕ ಸೋನು ಸೂದ್, ಕನ್ನಡ ಮತ್ತು ತುಳು ಚಿತ್ರರಂಗದ ನಟ ಪೃಥ್ವಿ ಅಂಬಾರ್ ಸೇರಿದಂತೆ ಹಲವು ಚಲನಚಿತ್ರ ಕಲಾವಿದರು ಆಗಮಿಸಲಿದ್ದಾರೆ. ಮಂಗಳೂರು ಮೂಲದ ತುಳು ಕಂಟೆಂಟ್ ಕ್ರಿಯೇಟರ್, ಯೂಟ್ಯೂಬರ್ ಹಾಗೂ ಪಾಡ್‌ಕ್ಯಾಸ್ಟರ್ ಶರಣ್ ಚಿಲಿಂಬಿ ಕೂಡ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.ಎರಡು ದಿನಗಳ ಫುಡ್ ಫೆಸ್ಟ್ಪಿಲಿಗೊಬ್ಬು ಸ್ಪರ್ಧೆಯೊಂದಿಗೆ ಅ. 17 ಮತ್ತು 18ರಂದು ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ ‘ಪುತ್ತೂರು ಫುಡ್ ಫೆಸ್ಟ್’ ನಡೆಯಲಿದೆ. ಬರ್ಗರ್, ಸ್ಯಾಂಡ್‌ವಿಚ್, ವಿವಿಧ ಬಗೆಯ ದೋಸೆಗಳು, ಶ್ರೀಫಲ ಐಸ್‌ಕ್ರೀಂ, ಘೀ ಪುಡ್ಡಿಂಗ್, ಘೀ ಮಿನಿ ಇಡ್ಲಿ, ವಿವಿಧ ಐಸ್‌ಕ್ರೀಂಗಳು, ಮೋಕ್‌ಟೇಲ್ ಜ್ಯೂಸ್, ಮಟ್ಕಾ ಸೋಡಾ ಹಾಗೂ ಕರಾವಳಿಯ ವಿಶೇಷ ಖಾದ್ಯಗಳು ಸೇರಿದಂತೆ 50ಕ್ಕೂ ಅಧಿಕ ಆಹಾರ ಮಳಿಗೆಗಳು ಇರಲಿವೆ.ಆಹಾರ ಮಳಿಗೆಗಳನ್ನು ಪಕೋಡ ಮಾದರಿಯಲ್ಲಿ ಆಕರ್ಷಕವಾಗಿ ಸಿದ್ಧಪಡಿಸಲಾಗುತ್ತಿದ್ದು, ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಮಳಿಗೆಗಳನ್ನು ಹರಾಜು ಮಾಡುವ ಬದಲು ನಿರ್ವಹಣಾ ವೆಚ್ಚದ ಮೊತ್ತವನ್ನು ಮಾತ್ರ ಪಡೆಯಲಾಗುವುದು ಎಂದು ಸಹಜ್ ರೈ ಬಳಜ್ಜ ವಿವರಿಸಿದರು.ನಾಲ್ಕು ವರ್ಷಗಳಲ್ಲಿ ನಾಲ್ಕು ಮನೆ ನಿರ್ಮಾಣ2020ರಲ್ಲಿ ಸಮಾಜಮುಖಿ ಚಿಂತನೆಯೊಂದಿಗೆ ಆರಂಭಗೊಂಡ ವಿಜಯ ಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ಕೋವಿಡ್ ಸಂದರ್ಭದಲ್ಲಿ ಸುಮಾರು ಐದು ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿತ್ತು. ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಕಾರ್ಯವನ್ನೂ ಕೈಗೊಂಡಿದ್ದು, ಪ್ರತಿ ವರ್ಷ ಒಂದು ಮನೆ ನಿರ್ಮಿಸಿ ಹಸ್ತಾಂತರಿಸುವ ಉದ್ದೇಶದಂತೆ ಈವರೆಗೆ ನಾಲ್ಕು ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಾಗಿದೆ. ಸಮಾಜಸೇವೆಯ ಜತೆಗೆ ಕಲೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೂ ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ ಎಂದು ಸಹಜ್ ರೈ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪಿಲಿಗೊಬ್ಬು ಸಮಿತಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಕಾರ್ಯಾಧ್ಯಕ್ಷ ರತನ್ ರೈ ಕುಂಬ್ರ, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಉಪಾಧ್ಯಕ್ಷ ಹಾಗೂ ಕೋಶಾಧಿಕಾರಿ ಅಶೋಕ್ ಅಡೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

Join WhatsApp Group
error: Content is protected !!