ನೀವು ಮೀನು ಸಾರು ಮಾಡುವುದಾದರೆ ತುಂಬಾ ಸರಳವಾದ ಮೀನಿನ ರೆಸಿಪಿ ನೀಡಿದ್ದೇವೆ, ಈ ಮೀನು ಸಾರನ್ನು ನೀವು ಸುಲಭವಾಗಿ ಮಾಡಬಹುದು, ಅಲ್ಲದೆ ತುಂಬಾ ರುಚಿಯಾಗಿ ಬರುತ್ತೆ ಕೂಡ. ಬನ್ನಿ ಈ ಮೀನಿನ ಸಾರು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:
ಬೇಕಾಗುವ ಸಾಮಗ್ರಿ
1/ 2 ಅಥವಾ 1 ಕೆಜಿ ಮೀನು
ಟೊಮೆಟೊ 2-3
ಒಂದೂವರೆ ಚಮಚ ಮೆಣಸಿನ ಪುಡಿ
1/2 ಚಮಚ ಕೊತ್ತಂಬರಿ ಪುಡಿ
1/2 ಅರಿಶಿಣ ಪುಡಿ
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಹಸಿ ಮೆಣಸು 2
ಈರುಳ್ಳಿ 1
ಸ್ವಲ್ಪ ಮೆಂತೆ
ಉಪ್ಪು
ಹುಣಸೆ ಹಣ್ಣು ಒಂದು ನಿಂಬೆ ಹಣ್ಣು ಗಾತ್ರದಷ್ಟು
ಒಂದು ಕಪ್ ತೆಂಗಿನಕಾಯಿ ಹಾಲು
ಮಾಡುವ ವಿಧಾನ:
ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ
ಎಣ್ಣೆ ಬಿಸಿಯಾದಾಗ ಸ್ವಲ್ಪ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ, ಸ್ವಲ್ಪ ಮೆಂತೆ, ಈರುಳ್ಳಿ ಹಾಕಿ ಫ್ರೈ ಮಾಡಿ, ಈರುಳ್ಳಿ ಸ್ವಲ್ಪ ಮೆತ್ತಗಾದ ಮೇಲೆ ನೀವು ಟೊಮೆಟೊ ಹಾಕಿ
ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ
ನಂತರ ಅರಿಶಿಣ ಪುಡಿ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ ಹಾಕಿ ಫ್ರೈ ಮಾಡಿ
ನಂತರ ಹುಣಸೆ ಹಣ್ಣಿನ ರಸ ಹಾಕಿ, ಉಪ್ಪು ಹಾಕಿ ಕುದಿ ಬರಿಸಿ
ನಂತರ ಮೀನು ಹಾಕಿ
ಮೀನು ಹಾಕಿದ ಮೇಲೆ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ
ನಂತರ ತೆಂಗಿನಕಾಯಿ ಹಾಲು ಹಾಕಿ 5 ನಿಮಿಷ ಕುದಿಸಿ
ನಂತರ ಉರಿಯಿಂದ ಇಳಿಸಿ ಸ್ವಲ್ಪ ಕರಿಬೇವು ಹಾಕಿ, ಪಾತ್ರೆಯ ಬಾಯಿ ಮುಚ್ಚಿ 10 ನಿಮಿಷ ಹಾಗೇ ಬಿಡಿ
ಇಷ್ಟು ಮಾಡಿದರೆ ಮೀನಿನ ಸಾರು ಸರ್ವ್ ಮಾಡಲು ರೆಡಿ.
ಸಲಹೆ: ನೀವು ತೆಂಗಿನಕಾಯಿ ಮಾರ್ಕೆಟ್‌ನಿಂದ ಪ್ಯಾಕ್ ಮಾಡಿಟ್ಟ ತೆಂಗಿನಕಾಯಿ ಹಾಲು ಬಳಸಬಹುದು.
ನೀವೇ ತೆಂಗಿನಕಾಯಿ ಹಾಲು ರೆಡಿ ಮಾಡಿದರೆ ಇನ್ನೂ ಒಳ್ಳೆಯದು
ಒಂದು ಕಪ್ ತೆಂಗಿನ ತುರಿಗೆ ಸ್ವಲ್ಪ ನೀರು ಹಾಕಿ ರುಬ್ಬಿ, ನಂತರ ಅದನ್ನು ಸೋಸಿ, ಆ ಹಾಲನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿದರೆ ಆ ಹಾಲನ್ನು ಬಳಸಬಹುದು.
ಇತರ ಟಿಪ್ಸ್
ನೀವು ಒಂದು ಚಮಚ ಖಾರದ ಪುಡಿ ಹಾಗೂ ಅರ್ಧ ಚಮಚ ಕಾಶ್ಮೀರಿ ಮೆಣಸಿನ ಪುಡಿ ಹಾಕಿದರೆ ಮೀನಿನ ಸಾರು ಕೆಂಪಗೆ ಆಕರ್ಷಕವಾಗಿ ಕಾಣುವುದು.
ಯಾವ ಮೀನು ಬಳಸಬಹುದು?
ನಿಮಗಿಷ್ಟವಾದ ಮೀನನ್ನು ಈ ಸಾರಿಗೆ ಬಳಸಬಹುದು, ಆದರೆ ಕೆರೆ ಮೀನು ಅಥವಾ ಹೊಳೆ ಮೀನು ಟೇಸ್ಟ್ ಅನಿಸುವುದಿಲ್ಲ, ಸಮುದ್ರ ಮೀನುಗಳಾದ ಬೂತಾಯಿ, ಬಂಗುಡೆ, ತುನಾ, ಅಂಜಲ್ ಹೀಗೆ ನಿಮಗಿಷ್ಟವಾದ ಮೀನು ಬಳಸಬಹುದು.