
ಮುಂಬೈ: ಸೆಪ್ಟೆಂಬರ್ 23: ಸಾಧನೆ ಅಂದ್ರೆ ಹೀಗಿರಬೇಕು.. ಮುಂಬೈನ ಕೊಳೆಗೇರಿಯಲ್ಲಿ ಜನಿಸಿದ್ರು, ಉದ್ಯಮ ಸಾಮ್ರಾಜ್ಯ ಕಟ್ಟಿ ಬೆಳೆಸಿದ್ದು ದುಬೈನ ಐಷರಾಮಿ ಜಗತ್ತಿನಲ್ಲಿ. ಇವರೇ ಡ್ಯಾನ್ಯೂಬ್ ಗ್ರೂಪ್ಸ್ ಸಂಸ್ಥಾಪಕ ರಿಜ್ವಾನ್ ಸಾಜನ್. ಕಲ್ಲು ಮುಳ್ಳುಗಳ ದಾರಿಯಲ್ಲಿ ಸಾಗಿ ಸಾಧನೆಯ ಶಿಖರವೇರಿದ ರಿಜ್ವಾನ್ ಅವರ ಬದುಕೇ ರೋಚಕ.ರಿಜ್ವಾನ್ ಅವರು ಹುಟ್ಟಿ ಬೆಳೆದಿದ್ದು,ಮುಂಬೈನ ಘಾಟ್‌ಕೋಪರ್‌ನ ಕೊಳೆಗೇರಿಯಲ್ಲಿ. ಬಡ ಕುಟುಂಬದಲ್ಲಿ ಜನಿಸಿದ ರಿಜ್ವಾನ್ ಮುಂಬೈನ ಕೊಳೆಗೇರಿಯಲ್ಲಿ ಬದುಕು ಸಾಗಿಸುತ್ತಿದ್ದರು. ಇದೇ ವೇಳೆ ರಿಜ್ವಾನ್ ಅವರ ತಂದೆ ‘ಸಬ್ಸಿಡಿ’ ಲಾಟರಿ ಗೆದ್ದ ಪರಿಣಾಮ ಅವರೆಲ್ಲರೂ ಮುಂದೆ ಒಂದು ಸಣ್ಣ ಅಪಾರ್ಟ್ಮೆಂತ್ ಗೆ ಸ್ಥಳಾಂತರಗೊಂಡರು. ಅವರ ತಂದೆ ಕುಟುಂಬವನ್ನು ನೋಡಿಕೊಳ್ಳಲು ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದರು. ಆದರೆ ಮಕ್ಕಳ ಬೋಧನಾ ಶುಲ್ಕವನ್ನು ಪಾವತಿಸಲು ಅವರು ಹೆಣಗಾಡುತ್ತಿದ್ದರು. ರಿಜ್ವಾನ್ ಅವರಿಗೆ ಕ್ಯಾಂಟಿನ್ ನಲ್ಲಿ ತಿನ್ನಲು ಅಥವಾ ಶಾಲೆಗೆ ಹೋಗಲು ಬಸ್ಸೇರಲು ಅವರಲ್ಲಿ ಹಣವಿರುತ್ತಿರಲಿಲ್ಲ. ಈ ಕಾರಣಕ್ಕಾಗಿ ತಂದೆಯಿಂದ ಕಾಡಿ ಬೇಡಿ 1000 ಸಾವಿರ ರೂ. ಸಾಲ ಪಡೆದು ಸಣ್ಣ ಪುಟ್ಟ ವ್ಯವಹಾರ ಮಾಡಲಾರಂಭಿಸಿದರು. ಪುಸ್ತಕಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಅದನ್ನು ತಮ್ಮ ಸ್ನೇಹಿತರಿಗೆ ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಲಾರಂಭಿಸಿದರು. ಜೊತೆಗೆ ಮನೆ ಮನೆಗೆ ತೆರಳಿ ಹಾಲು ಪ್ಯಾಕೇಟ್ ಗಳನ್ನು ವಿತರಿಸಲು ಪ್ರಾರಂಭಿಸಿದರು.ರಾಖಿಗಳನ್ನು ಖರೀದಿಸಿ ಮಾರಾಟ ಮಾಡುವುದರಿಂದ ಹಿಡಿದು ಪಟಾಕಿ ಮಾರಾಟದವರೆಗೆ ಹೆಚ್ಚುವರಿ ಹಣವನ್ನು ಗಳಿಸಲು ಅವರು ಏನೇನು ಸಾಧ್ಯವೋ ಅದೆಲ್ಲವನ್ನು ಮಾಡಿದರು. ಹೀಗೆ ಅವರಿಗೆ 16 ತುಂಬುವಾಗ ಅವರ ಜೀವನದಲ್ಲಿ ದುರಂತ ಸಂಭವಿಸಿತು. ತಮ್ಮ ತಂದೆಯನ್ನು ಕಳೆದುಕೊಂಡ ರಿಜ್ವಾನ್ ಶಾಲೆಯನ್ನು ಅರ್ಧಕ್ಕೆ ನಿಲ್ಲಿಸಿ, ಕುಟುಂಬದ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಾಯಿತು.
ಹೆಚ್ಚಿನ ಹಣ ಗಳಿಸಬೇಕು ಅನ್ನೋ ಮಹದಾಸೆಯೊಂದಿಗೆ 1981ರಲ್ಲಿ ಕುವೈತ್ ದೇಶಕ್ಕೆ ತೆರಳಿದ ರಿಜ್ವಾನ್ ಸಾಜನ್, ತಮ್ಮ ಚಿಕ್ಕಪ್ಪ ನಡೆಸುತ್ತಿದ್ದ ಕಟ್ಟಡ ನಿರ್ಮಾಣ ಸಾಮಗ್ರಿಗಳ ಮಾರಾಟ ಮಳಿಗೆಯಲ್ಲಿ ಸೇಲ್ಸ್‌ಮನ್ ಆಗಿ ಕಾರ್ಯಾರಂಭ ಮಾಡಿದರು. ಅವರ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದಾಗಿ ಈ ವೃತ್ತಿಯಲ್ಲಿ ಯಶಸ್ಸು ಕಂಡರು. ಎಲ್ಲವೂ ಸುಗಮವಾಗಿ ಸಾಗುತ್ತಿದ್ದಾಗ ದುರಾದೃಷ್ಟವಶಾತ್ ಮತ್ತೆ ಎಲ್ಲವನ್ನು ಕಳೆದುಕೊಳ್ಳಬೇಕಾಯಿತು. 1991 ರಲ್ಲಿ ನಡೆದ ಗಲ್ಫ್ ಯುದ್ಧವು ಮುಂಬೈಗೆ ಹಿಂದಿರುಗುವ ಅನಿವಾರ್ಯತೆ ಸೃಷ್ಟಿಸಿತು. ಇದು ಅವರ ಸಾಧನೆಯ ಹಾದಿಗೆ ಅಡ್ಡಿಯಾಗಿ ಪರಿಣಮಿಸಿತು. ಮುಂಬೈನಲ್ಲಿ ಮತ್ತೆ ಸಾಮಾನ್ಯರಂತೆ ಬದುಕು ಕಟ್ಟಿಕೊಳ್ಳಬೇಕಾಯಿತು.ಕೆಲ ವರ್ಷಗಳ ನಂತರ, ಅವರು ದುಬೈನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಹೊರಟರು. 1993 ರಲ್ಲಿ, ರಿಜ್ವಾನ್ ವ್ಯಾಪಾರ ಸಂಸ್ಥೆಯನ್ನು ಪ್ರಾರಂಭಿಸಿದರು. ಬ್ರೋಕರೇಜ್ ವ್ಯವಹಾರದಿಂದ ಒಂದಷ್ಟು ಕಮಿಷನ್ ಗಳಿಸಲು ಅವರು ಪ್ರಾರಂಭಿಸಿದರು. ಮುಂದೆ ಮುಟ್ಟಿದೆಲ್ಲವೂ ಚಿನ್ನ ಎಂಬಂತೆ ಅವರ ಪರಿಶ್ರಮವು ಫಲ ನೀಡಲಾರಂಭಿಸಿತು.
ಕೆಲ ವರ್ಷಗಳ ಬಳಿಕ ಕಟ್ಟಡ ಸಾಮಗ್ರಿ ವ್ಯವಹಾರವನ್ನು ಪ್ರಾರಂಭಿಸಿದರು. ಇದನ್ನು ಮುಂದಿನ ಒಂದೂವರೆ ದಶಕದಲ್ಲಿ, ಅವರು ವೈವಿಧ್ಯತೆಯನ್ನು ಮುಂದುವರೆಸಿದರು. ವ್ಯವಹಾರಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬಿಲು ನಿರ್ಧರಿಸಿ 2006 ರಲ್ಲಿ, ಅವರು ನೈರ್ಮಲ್ಯ ಪರಿಹಾರಗಳ ಬ್ರ್ಯಾಂಡ್ ಮಿಲಾನೊವನ್ನು ಪ್ರಾರಂಭಿಸಿದರು. 2008 ರಲ್ಲಿ, ಅವರು ಡ್ಯಾನ್ಯೂಬ್ ಹೋಮ್‌ನೊಂದಿಗೆ ಹೋಮ್ ಫರ್ನಿಶಿಂಗ್ ವ್ಯವಹಾರದಲ್ಲಿ ತೊಡಗಿಸಿಕೊಂಡರು. ನಾಲ್ಕು ವರ್ಷಗಳ ನಂತರ, 2012 ರಲ್ಲಿ, ಅಲ್ಯೂಮಿನಿಯಂ ಕಾಂಪೋಸಿಟ್ ಪ್ಯಾನೆಲ್‌ಗಳ ವ್ಯವಹಾರವಾದ ಅಲುಕೋಪನೆಲ್ ಬಂದಿತು. 2014 ರಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಕಾಲಿಟ್ಟರು. ಅಂದಿನಿಂದ ಇಂದಿನವರೆಗೆ ಅವರು ಹಿಂತಿರುಗಿ ನೋಡಲೇ ಇಲ್ಲ.
2019 ರ ವೇಳೆಗೆ ಡ್ಯಾನ್ಯೂಬ್ ಗ್ರೂಪ್ USD 1.3 ಶತಕೋಟಿ ವಾರ್ಷಿಕ ವಹಿವಾಟು ನಡೆಸಿತು, ಮಧ್ಯಪ್ರಾಚ್ಯ ಮತ್ತು ಅದರಾಚೆಗಿನ ಮಾರುಕಟ್ಟೆಗಳಲ್ಲಿ ಬಲವಾಗಿ ಬೆಳೆದು ನಿಂತಿತು. ಇಂದು, ಡ್ಯಾನ್ಯೂಬ್ ಗ್ರೂಪ್ ಒಮಾನ್, ಬಹ್ರೇನ್ ಮತ್ತು ಸೌದಿ ಅರೇಬಿಯಾದಂತಹ ದೇಶಗಳಿಗೂ ಕಾರ್ಯಾಚರಣೆ ವ್ಯಾಪ್ತಿ ವಿಸ್ತರಿಸಿದೆ.
ರಿಜ್ವಾನ್ ಅವರ ದೂರದೃಷ್ಟಿ ಮತ್ತು ಪಟ್ಟುಬಿಡದ ಪರಿಶ್ರಮಪಟ್ಟ ಕಾರಣ ಪ್ರಚಂಡ ಆರ್ಥಿಕ ಯಶಸ್ಸಿಗೆ ಕಾರಣವಾಗಿದೆ. UAE ಯ ಆರ್ಥಿಕ ಸಚಿವಾಲಯದ ಪ್ರಕಾರ USD 2.5 ಶತಕೋಟಿ (Rs 20,830 ಕೋಟಿ) ನಿವ್ವಳ ಮೌಲ್ಯದೊಂದಿಗೆ, ರಿಜ್ವಾನ್ ಸಜನ್ ಈಗ ದುಬೈನ ಶ್ರೀಮಂತ ಭಾರತೀಯರಲ್ಲಿ ಒಬ್ಬರಾಗಿ ಬೆಳೆದು ನಿಂತಿದ್ದಾರೆ.







