ಚನ್ನಪಟ್ಟಣ (ರಾಮನಗರ): ಉಪ ಚುನಾವಣೆ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಜೆಡಿಎಸ್‌ನಿಂದ ಕಣಕ್ಕಿಳಿದಿರುವ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ನಿರಂತರ ಪ್ರಚಾರಕ್ಕಿಳಿದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬುಧವಾರ ಪಟ್ಟಣದ ಅಲ್ಪಸಂಖ್ಯಾತರ ಮತಗಳತ್ತ ಚಿತ್ತ ಹರಿಸಿದ್ದಾರೆ.
ಪಟ್ಟಣದಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಾಗಿರುವ ಸಯ್ಯದ್‌ವಾಡಿ ದರ್ಗಾ, ಟಿಪ್ಪುನಗರ, ಶೇರು ಹೋಟೆಲ್ ವೃತ್ತ ಸೇರಿದಂತೆ ವಿವಿಧೆಡೆ ತೆರೆದ ವಾಹನದಲ್ಲಿ ರೋಡ್ ಷೋ ನಡೆಸಿ ಮತ ಯಾಚಿಸಿದರು. ನಂತರ, ಬಡಾಮಕಾನ್‌ನ ಹಜರತ್ ಸೈಯದ್ ಮಹಮ್ಮದ್ ಅಖಿಲ್ ಷಾ ಖಾದ್ರಿ ಅವರ ದರ್ಗಾಕ್ಕೆ ಭೇಟಿ ನೀಡಿ ಚಾದರ್ ಅರ್ಪಿಸಿದರು.
ನನಗೆ ಜಾತಿ-ಧರ್ಮವಿಲ್ಲ: ರೋಡ್ ಶೋನಲ್ಲಿ ಮಾತನಾಡಿದ ಎಚ್‌ಡಿಕೆ, ‘ನನಗೆ ಜಾತಿ-ಧರ್ಮವಿಲ್ಲ. ಎಲ್ಲರನ್ನೂ ಪ್ರೀತಿಸುವ ನಾನು, ಸರ್ವ ಜನಾಂಗದ ಶಾಂತಿ ತೋಟ ಎಂಬ ತತ್ವ ಅಳವಡಿಸಿಕೊಂಡಿದ್ದೇನೆ. ಅಲ್ಪಸಂಖ್ಯಾತರಿಗೆ ದೋಖಾ ಮಾಡುವ ಮಾತೇ ಇಲ್ಲ. ನಾಗಮಂಗಲದಲ್ಲಿ ಗಲಭೆಯಾದಾಗ ಅಂಗಡಿ ಕಳೆದುಕೊಂಡ ಹಿಂದೂ-ಮುಸ್ಲಿಮರಿಗೆ ವೈಯಕ್ತಿಕವಾಗಿ ನಾನೇ ಪರಿಹಾರ ಕೊಟ್ಟಿದ್ದೇನೆ. ಜೈಲು ಸೇರಿದ್ದ 54 ಮಂದಿಯನ್ನು ನಮ್ಮ ವಕೀಲರ ಮೂಲಕ ಬಿಡುಗಡೆಗೊಳಿಸಿದೆ. ಅದರಲ್ಲಿ 27 ಮುಸ್ಲಿಮರು ಸಹ ಇದ್ದರು’ ಎಂದರು.
‘ಹಿಂದೆ ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ 900 ಮುಸ್ಲಿಮರು ಇನ್ನೂ ಜೈಲಿನಲ್ಲಿದ್ದಾರೆ. ನಾವು ಮುಸ್ಲಿಮರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಒಬ್ಬರೂ ಬಿಡುಗಡೆಯಾಗಿಲ್ಲ. ಇದೇ ನಮಗೂ ಅವರಿಗೂ ವ್ಯತ್ಯಾಸ’ ಎಂದರು.
ಕೆಂಗಲ್‌ನಲ್ಲಿ ಸಿಪಿವೈ ಪೂಜೆ: ಕೆಂಗಲ್‌ನ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಹೊಂಗನೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ಪ್ರಚಾರ ಮಾಡಿದರು. ಮಾಜಿ ಸಂಸದ ಡಿ.ಕೆ.ಸುರೇಶ್, ನೆಲಮಂಗಲ ಶಾಸಕ ಶ್ರೀನಿವಾಸ್, ಮಾಜಿ ಶಾಸಕ ಎಂ.ಸಿ.ಅಶ್ವಥ್ ಸೇರಿದಂತೆ ಸ್ಥಳೀಯ ಮುಖಂಡರು ಅವರಿಗೆ ಸಾಥ್ ನೀಡಿದರು.