‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸುವ ಕುರಿತು ಪ್ರಕಟಿಸಿದ್ದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಕೆಲವೇ ಗಂಟೆಗಳಲ್ಲಿ ಹಿಂಪಡೆದು ಅಚ್ಚರಿ ಮೂಡಿಸಿದೆ.

ಮೊದಲಿಗೆ ಪೂರಕ ಬೇಡಿಕೆಗಳ ಕುರಿತ ಅನುದಾನಕ್ಕೆ ಸಂಬಂಧಿಸಿದ ವಿಷಯಗಳಿಗೆ ಅನುಮೋದನೆ ಪಡೆಯಲು ಸರ್ಕಾರ ಬಯಸಿದೆ.

ಆ ಬಳಿಕವಷ್ಟೇ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಮಂಡನೆ ಬಗ್ಗೆ ಚಿಂತನೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಸಂಸತ್ತಿನ ಚಳಿಗಾಲದ ಅಧಿವೇಶನ ಇದೇ 20ಕ್ಕೆ ಮುಕ್ತಾಯಗೊಳ್ಳಲಿದೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವನೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಮಸೂದೆ ಮಂಡನೆಯಾದರೆ ಆರಂಭದಲ್ಲಿಯೇ ವ್ಯಾಪಕ ವಿರೋಧ ವ್ಯಕ್ತವಾಗಬಹುದು ಎಂಬ ಕಳವಳ ಕೇಂದ್ರಕ್ಕೆ ಇದೆ ಎಂದು ಮೂಲಗಳು ಹೇಳಿವೆ.

ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಅವರು ಸಂವಿಧಾನ (129ನೇ ತಿದ್ದುಪಡಿ) ಮಸೂದೆ-2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ ಮಸೂದೆ- 2024 ಅನ್ನು ಸೋಮವಾರ ಮಧ್ಯಾಹ್ನ 12 ಗಂಟೆಗೆ ಮಂಡಿಸುವ ಕುರಿತು ಲೋಕಸಭಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಇದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆಯನ್ನು ಮಂಡಿಸುವ ಉದ್ದೇಶ ಹೊಂದಿದ್ದ ಮಸೂದೆಗಳಾಗಿದ್ದವು.

ಆದರೆ, ಇದನ್ನು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಈ ಎರಡೂ ಮಸೂದೆಗಳನ್ನು ಕೈಬಿಟ್ಟು, ಪರಿಷ್ಕೃತ ಕಲಾಪದ ಪಟ್ಟಿಯನ್ನು ಲೋಕಸಭೆಯ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಈ ಮಸೂದೆಗಳ ಕುರಿತ ಪ್ರತಿಗಳನ್ನು ಕಳೆದ ವಾರ ನಿಯಮಾವಳಿ ಪ್ರಕಾರ ಸಂಸತ್ತಿನ ಸದಸ್ಯರಿಗೆ ನೀಡಲಾಗಿತ್ತು.

ಪರಿಷ್ಕೃತ ಪಟ್ಟಿಯ ಪ್ರಕಾರ, ಲೋಕಸಭೆಯಲ್ಲಿ ಪೂರಕ ಬೇಡಿಕೆಗಳ ಅನುದಾನಕ್ಕೆ ಸಂಬಂಧಿಸಿದ ಚರ್ಚೆ ನಡೆಯಲಿದೆ. ಗೋವಾ ರಾಜ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯದ ಮರು ಹೊಂದಾಣಿಕೆ ಮಸೂದೆಯನ್ನು ಸರ್ಕಾರ ಮಂಡಿಸಲಿದೆ.

ರಾಜ್ಯಸಭೆಯಲ್ಲಿ ಸಂವಿಧಾನಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಚರ್ಚೆಯು ಸೋಮವಾರ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!