ಕೋಝಿಕ್ಕೋಡ್ನ ವೈದ್ಯಕೀಯ ಕಾಲೇಜು ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಲಕ್ಷ್ಮಿ ರಾಧಾಕೃಷ್ಣನ್ (20) ಸಾವು ನಿಗೂಢತೆಯಿಂದ ಕೂಡಿದೆ ಹಾಗೂ ಅನುಮಾನಾಸ್ಪದವಾಗಿದೆ ಎಂದು ಮೃತ ಯುವತಿಯ ಸಂಬಂಧಿಕರು ಆರೋಪಿಸಿದ್ದು, ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರಿಗೆ ಸದ್ಯ ಪ್ರಕರಣವನ್ನು ಭೇದಿಸುವುದು ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಬಗ್ಗೆ ಕೂಲಂಕುಷ ತನಿಖೆ ನಡೆಯಬೇಕಿದ್ದು, ಆಯುಕ್ತರಿಗೆ ದೂರು ನೀಡಲಾಗುವುದು ಎಂದು ಸಂಬಂಧಿ ಹರಿಪ್ರಸಾದ್ ತಿಳಿಸಿದ್ದಾರೆ.
ಆತ್ಮಹತ್ಯೆ ಅಲ್ಲ!
ವಿದ್ಯಾರ್ಥಿನಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಳ್ಳಲು ಯಾವುದೇ ಕಾರಣವಿಲ್ಲ ಎಂದು ಆಕೆಯ ಕುಟುಂಬಸ್ಥ ಹರಿಪ್ರಸಾದ್ ಹೇಳಿದ್ದಾರೆ. ಲಕ್ಷ್ಮಿ ಸಾವಿಗೀಡಾಗಲು ಕಾರಣವೇನು ಎಂಬುದು ಅನುಮಾನ. ಆಕೆ ಸಾಯುವಂತ ಪರಿಸ್ಥಿತಿ ಇರಲಿಲ್ಲ. ಇದರಲ್ಲಿ ಯಾರದ್ದೋ ಕೈವಾಡವಿದೆ ಎಂಬುದು ನಮ್ಮ ಕಟುಂಬದವರ ಗಟ್ಟಿ ಅನುಮಾನ ಎಂದಿದ್ದಾರೆ. ಯುವತಿಯ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕಾಗಿ ಮೊದಲು ನರ್ಸಿಂಗ್ ಕಾಲೇಜಿನಲ್ಲಿ ಇರಿಸಲಾಯಿತು. ನಂತರ ಕೊಟ್ಟಾಯಂಗೆ ಕುಟುಂಬದವರು ತೆಗೆದುಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣದ ತನಿಖೆಯನ್ನು ಚುರುಕು
ಲಕ್ಷ್ಮಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆಕೆಯ ಸಹಪಾಠಿಗಳು ಮತ್ತು ಹಾಸ್ಟೆಲ್ ಆಡಳಿತ ಮಂಡಳಿಯಿಂದ ಪೊಲೀಸರು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಸಾವಿಗೆ ದೃಢವಾದ ಕಾರಣವೇನು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ, ವೈಯಕ್ತಿಕ ಕಾರಣಗಳು ಆಕೆಯನ್ನು ಆತ್ಮಹತ್ಯೆಗೆ ದೂಡಿರಬಹುದು ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ಹೇಳಲಾಗಿದೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಖಾಕಿ ಪಡೆಗೆ ಗೊಂದಲ ಮೂಡಿದೆ, ಒಂದೆಡೆ ಹೆತ್ತವರು ಮಗಳ ಸಾವಿನ ಹಿಂದೆ ಯಾರದ್ದೋ ಕೈವಾಡವಿರುವುದು ಖಂಡಿತ ಎಂದರೆ, ಮತ್ತೊಂದೆಡೆ, ಆಕೆ ಬರೆದಿಟ್ಟ ಡೆತ್ನೋಟ್ ಬೇರೆಯೇ ಕಥೆ ಹೇಳಿದೆ.
ಡೆತ್ನೋಟ್
ಕೊಟ್ಟಾಯಂನ ಕಿಡಂಗೂರು ಮೂಲದ ಲಕ್ಷ್ಮಿ ನಿನ್ನೆ (ಡಿ.17) ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಲಕ್ಷ್ಮಿ ನಿನ್ನೆ ಕ್ಲಾಸ್ಗೆ ಹೋಗಿರಲಿಲ್ಲ. ಅನಾರೋಗ್ಯದ ಕಾರಣ ರಜೆ ಹಾಕುತ್ತಿರುವುದಾಗಿ ತನ್ನ ಸ್ನೇಹಿತರಿಗೆ ತಿಳಿಸಿದ್ದಳು ಎನ್ನಲಾಗಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಯಾರೋ ಆಕೆ ಉಳಿದಿದ್ದ ರೂಮ್ ಸ್ವಚ್ಛಗೊಳಿಸಲು ಬಂದಾಗ ಬಾಗಿಲು ತೆರೆದಿಲ್ಲ. ಅನುಮಾನಗೊಂಡ ಸ್ಥಳೀಯರು ಬಲವಂತವಾಗಿ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಯುವತಿ ಫ್ಯಾನ್‌ಗೆ ಶಾಲು ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಸ್ಥಳ ಪರಿಶೀಲಿಸಿದ ಪೊಲೀಸರಿಗೆ ಸಿಕ್ಕ ಡೆತ್ನೋಟ್ನಲ್ಲಿ, ನನ್ನ ಸಾವಿಗೆ ಯಾರು ಕಾರಣರಲ್ಲ. ಇದರ ಹಿಂದೆ ಯಾರ ಕೈವಾಡವೂ ಇಲ್ಲ ಎಂದು ಯುವತಿ ಬರೆದಿರುವುದು ಖಾಕಿ ಪಡೆಗೆ ಅಚ್ಚರಿ ಮೂಡಿಸಿದೆ