ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 10ರಿಂದ ಆರಂಭವಾಗುವ ಜಾತ್ರೋತ್ಸವ ಹಾಗೂ ಏಪ್ರಿಲ್ 17ರಂದು ನಡೆಯುವ ಬ್ರಹ್ಮರಥೋತ್ಸವಕ್ಕೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಜಾತ್ರೆಯ ಅಂಗವಾಗಿ ಮಾರ್ಚ್ 16ರಂದು ಬೆಳಿಗ್ಗೆ ಬ್ರಹ್ಮರಥ ಮಂದಿರದಿಂದ ಬ್ರಹ್ಮರಥವನ್ನು ರಥಬೀದಿಗೆ ತರಲಾಯಿತು.
ಶುಭ ಮುಹೂರ್ತದಲ್ಲಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ವಸಂತ ಕೆದಿಲಾಯ ಅವರು ಬ್ರಹ್ಮರಥಕ್ಕೆ ಮಲ್ಲಿಗೆ ಪುಷ್ಪ, ಗಂಧ ಮತ್ತು ಬಿಲ್ವಪತ್ರೆ ಸಮರ್ಪಿಸಿ ಜಾತ್ರೆ ವಿಜೃಂಭಣೆಯಿಂದ ನೆರವೇರಲೆಂದು ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹಾಗೂ ಅರ್ಚಕರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಇಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್ ಅವರ ಮಾರ್ಗದರ್ಶನದಲ್ಲಿ ದೇವಳದ ನೌಕರರು ರಥದ ಹಿಂಬದಿ ಚಕ್ರಕ್ಕೆ ದಂಡೆ ಇಟ್ಟು ಚಾಲನೆ ನೀಡಿದರು. ಬಳಿಕ ಕ್ರೇನ್ ಸಹಾಯದಿಂದ ಬ್ರಹ್ಮರಥವನ್ನು ಹೊರಗೆಳೆಯಲಾಯಿತು. ದೇವಾಲಯದ ಸಿಬ್ಬಂದಿ ಮತ್ತು ನೌಕರರ ಸಹಕಾರದಿಂದ ರಥವನ್ನು ರಥಬೀದಿಗೆ ತಂದು ನಿಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಥದ ದಂಡೆಯಲ್ಲಿದ್ದ ಬಿಲ್ವಪತ್ರೆ, ತುಳಸಿ ಹಾಗೂ ಬಿಳಿ ಪುಷ್ಪಗಳ ಪೈಕಿ ಬಿಲ್ವಪತ್ರೆ ಮತ್ತು ಮಲ್ಲಿಗೆ ಹಾರ ಭೂಸ್ಪರ್ಶ ಮಾಡಿದ್ದು, ಜಾತ್ರೆಗೆ ಶುಭ ಸೂಚಕವೆಂದು ಭಕ್ತರು ಅಭಿಪ್ರಾಯಪಟ್ಟರು. ಬಳಿಕ ಬ್ರಹ್ಮರಥವನ್ನು ಅದೇ ಸ್ಥಳದಲ್ಲಿ ನೇರವಾಗಿ ಸ್ಥಾಪಿಸಲಾಯಿತು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಹಾಯಕ ಪದ್ಮನಾಭ, ಪಿ.ಜಿ. ಚಂದ್ರಶೇಖರ್, ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಎಂ., ವರುಣ್ ಪಂಜಿಗುಡ್ಡೆ, ಕೊಯಿಲ ಪಶುಸಂಗೋಪನಾ ನಿರ್ದೇಶಕ ಡಾ. ಪ್ರಸನ್ನ ಹೆಬ್ಬಾರ್, ಜಯರಾಜ್ ಪಾದುಕ, ಸುಧೀರ್ ಕಲ್ಲಾರೆ, ಬಾಲಚಂದ್ರ ಸೊರಕೆ, ಗೋಪಾಲ್, ಗಣೇಶ್ ಸೇರಿದಂತೆ ದೇವಳದ ನೌಕರರು ಹಾಗೂ ಭಕ್ತರು ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಮಾತನಾಡಿ, ‘ಏಪ್ರಿಲ್ 1ರಂದು ಗೊನೆ ಮುಹೂರ್ತ ನಡೆಯಲಿದೆ. ಜಾತ್ರೋತ್ಸವವು ಸಡಗರ–ಸಂಭ್ರಮದಿಂದ ನೆರವೇರಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ರಥ ಕಟ್ಟುವ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ದೇವಳದ ರಾಜಾಂಗಣದಲ್ಲಿ ಪುನರ್‌ನಿರ್ಮಾಣಗೊಳ್ಳುತ್ತಿರುವ ಐದು ಕಟ್ಟೆಗಳ ಕಾಮಗಾರಿ ಏಪ್ರಿಲ್ 1ರೊಳಗೆ ಪೂರ್ಣಗೊಳ್ಳಲಿದೆ. ಅಶ್ವತ್ಥ ಕಟ್ಟೆಯ ಕೆಲಸವೂ ಅಂತಿಮ ಹಂತದಲ್ಲಿದೆ’ ಎಂದರು.

Leave a Reply

Your email address will not be published. Required fields are marked *

Join WhatsApp Group
error: Content is protected !!