ದಕ್ಷಿಣ ಮತ್ತು ಕೇಂದ್ರ ವಿಭಾಗದ ಎಸಿಪಿಗಳ ಸಮನ್ವಯದಲ್ಲಿ, ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅವರ ಮೇಲ್ವಿಚಾರಣೆಯಲ್ಲಿ ಕೋಟೆಕಾರ ಬೀರಿ ಹಾಗೂ ಕೊಣಾಜೆ ಬಂಟ್ಸ್ ಭವನದಲ್ಲಿ ಸೋಮವಾರ ಸಂಜೆ ವಿದ್ಯಾರ್ಥಿಗಳಿಗೆ ದಿಢೀರ್ ಮಾದಕ ವಸ್ತು ಸೇವನೆ ಪರೀಕ್ಷೆ ನಡೆಸಲಾಯಿತು.ಖಾಸಗಿ ಹಾಗೂ ಕಾಲೇಜು ಬಸ್‌ಗಳಲ್ಲಿ ಸಂಚರಿಸುತ್ತಿದ್ದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ತಡೆದು ಮಲ್ಟಿ ಡ್ರಗ್ ಟೆಸ್ಟಿಂಗ್ ಕಿಟ್‌ಗಳ ಮೂಲಕ ಪರೀಕ್ಷಿಸಲಾಯಿತು.ಉಳ್ಳಾಲ ವ್ಯಾಪ್ತಿಯ ಕೋಟೆಕಾರ ಬೀರಿಯಲ್ಲಿ ಎಸ್‌ಡಿಎಂ ಕಾಲೇಜು, ನಿಟ್ಟೆ ಕೆ.ಎಸ್. ಹೆಗ್ಡೆ, ಸೇಂಟ್ ಅಲೋಶಿಯಸ್, ಪಿಎ ಕಾಲೇಜು, ಬಿಯರೀಸ್ ಇನ್‌ಸ್ಟಿಟ್ಯೂಟ್, ಟಿಪ್ಪು ಸುಲ್ತಾನ್ ಕಾಲೇಜು ಹಾಗೂ ಕೆನರಾ ಕಾಲೇಜಿನ ಒಟ್ಟು 72 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಯಿತು. ಇವರಲ್ಲಿ 71 ವಿದ್ಯಾರ್ಥಿಗಳ ವರದಿ ನೆಗೆಟಿವ್ ಬಂದಿದ್ದು, ಒಬ್ಬ ವಿದ್ಯಾರ್ಥಿಯ ವರದಿ ಪಾಸಿಟಿವ್ ಬಂದಿದೆ.ಇನ್ನು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ಸ್ ಭವನದಲ್ಲಿ ಪಿಎ ಕಾಲೇಜಿನ ಎರಡು ಬಸ್‌ಗಳನ್ನು ತಡೆದು 87 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ.ಸಂಜೆ 4.30ರಿಂದ 6.00 ಗಂಟೆಯವರೆಗೆ ಈ ದಿಢೀರ್ ಡ್ರಗ್ ಪರೀಕ್ಷಾ ಕಾರ್ಯಾಚರಣೆ ನಡೆಯಿತು.ವಿದ್ಯಾರ್ಥಿಗಳಲ್ಲಿ ಡ್ರಗ್ ಸೇವನೆ ಪಾಸಿಟಿವ್ ಪ್ರಕರಣಗಳ ಪ್ರಮಾಣ ಇಳಿಮುಖವಾಗಿರುವುದು ಉತ್ತೇಜನಕಾರಿ ಬೆಳವಣಿಗೆಯಾಗಿದ್ದರೂ, ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಹಾಗೂ ಕ್ರಮಗಳ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಡ್ರಗ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ವಿದ್ಯಾರ್ಥಿಯನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಕೌನ್ಸೆಲಿಂಗ್‌ಗೆ ಕಳುಹಿಸಲಾಗುವುದು. ಅಲ್ಲದೆ, ಮುಂದಿನ ದಿನಗಳಲ್ಲಿಯೂ ನಿರಂತರ ಅನುಸರಣೆ (ಫಾಲೋಅಪ್) ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.









