ಮಂಗಳೂರು/ಬಂಟ್ವಾಳ: ಚಿನ್ನಾಭರಣ ದೋಚುವ ಉದ್ದೇಶದಿಂದ ವೃದ್ಧೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆಗೈದ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.ಬಂಟ್ವಾಳ ತಾಲೂಕಿನ ಅಮ್ಮುಂಜೆ ನಿವಾಸಿ ಬೆನಡಿಕ್ಟ್ ಕಾರ್ಲೋ (73) ಅವರ ಕೊಲೆ ಪ್ರಕರಣದಲ್ಲಿ ಆರೈಕೆ ಮಾಡುತ್ತಿದ್ದ ಏಲ್ಮಾ ಪ್ರೆಶ್ಚಿತ್ ಬರೆಟ್ರೋ (23), ಸತೀಶ ನಾಯಕ್ (28) ಹಾಗೂ ಚರಣ್ ಕುಮಾರ್ (31) ಶಿಕ್ಷೆಗೆ ಗುರಿಯಾದವರು.ಪ್ರಕರಣದ ವಿವರದಂತೆ, ಬೆನಡಿಕ್ಟ್ ಕಾರ್ಲೋ ಅವರ ಬಳಿಯಿದ್ದ ಸುಮಾರು ₹3 ಲಕ್ಷ ಮೌಲ್ಯದ 61.070 ಗ್ರಾಂ ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದ ಏಲ್ಮಾ ತನ್ನ ಸ್ನೇಹಿತ ಸತೀಶ ನಾಯಕ್‌ನ ಸಹಾಯದಿಂದ ವೃದ್ಧೆ ಸೇವಿಸುವ ಆಹಾರದಲ್ಲಿ ವಿಷ ಬೆರೆಸಿ ಕೊಲ್ಲಲು ಯತ್ನಿಸಿದ್ದಳು. ಅದು ವಿಫಲವಾದ ಬಳಿಕ, 2021ರ ಜನವರಿ 25ರ ರಾತ್ರಿ ಚರಣ್ ಕುಮಾರ್ ಸಹಾಯದಿಂದ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿ, ಸಾಕ್ಷ್ಯ ನಾಶಪಡಿಸಿದ್ದರು ಎಂದು ಆರೋಪಿಸಲಾಗಿತ್ತು.ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ, ದರೋಡೆ, ಸಂಚು ಹಾಗೂ ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಐಪಿಸಿ ಕಲಂಗಳಡಿ ಪ್ರಕರಣ ದಾಖಲಾಗಿತ್ತು.ಆಗಿನ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಆರೋಪಿಗಳನ್ನು ಬಂಧಿಸಿದ್ದು, ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಜುಲೈ 28ರಂದು ಮೂವರು ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಸರ್ಕಾರದ ಪರ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!