ಕರ್ನಾಟಕ ರಾಜ್ಯಾದ್ಯಂತ ಪ್ರಸ್ತುತ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬರೋಬ್ಬರಿ 84,31,612 ಮತದಾರರನ್ನು ಮೊದಲ ಕರಡು ಮತದಾರರ ಪಟ್ಟಿಯಿಂದ ಹೊರಗಿಡಲು ಗುರುತಿಸಲಾಗಿದೆ. ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಸವಿಸ್ತಾರವಾದ ಮಾಹಿತಿ ಹಂಚಿಕೊಂಡಿದ್ದಾರೆ.ಪ್ರತಿಯೊಬ್ಬ ಮತದಾರರ ಮನೆ ಬಾಗಿಲಿಗೆ ತೆರಳಿ ಸ್ಥಳ ಮಹಜರು ಮಾಡಲಾಗಿದ್ದು, ಮೃತರ ಡೆತ್ ಸರ್ಟಿಫಿಕೇಟ್ ಸಂಗ್ರಹಿಸುವುದರ ಜೊತೆಗೆ ಸಂಬಂಧಪಟ್ಟವರಿಂದ ಸಹಿ ಕೂಡ ಪಡೆಯಲಾಗಿದೆ.ಹೀಗಾಗಿ ಈ 84 ಲಕ್ಷಕ್ಕೂ ಅಧಿಕ ಜನರನ್ನು ಮೊದಲ ಕರಡು ಪಟ್ಟಿಯಲ್ಲಿ ಪರಿಗಣಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಕರಡು ಪಟ್ಟಿಯಿಂದ ಕೈಬಿಡಲಾಗುತ್ತಿರುವ 84.31 ಲಕ್ಷ ಜನರ ವರ್ಗೀಕರಣಚುನಾವಣಾ ಆಯೋಗವು ಮೊದಲ ಕರಡು ಪಟ್ಟಿಯಿಂದ ಹೊರಗಿಡಲು ಗುರುತಿಸಿರುವ ಒಟ್ಟು 84,31,612 ಮತದಾರರಲ್ಲಿ ಶಾಶ್ವತವಾಗಿ ಸ್ಥಳಾಂತರಗೊಂಡವರ ಸಂಖ್ಯೆ ಅತ್ಯಂತ ಹೆಚ್ಚಿದ್ದು, ಬರೋಬ್ಬರಿ 51,74,968 ಜನರು ಈ ವ್ಯಾಪ್ತಿಗೆ ಬರುತ್ತಾರೆ. ಇನ್ನು 14,99,799 ಮೃತಪಟ್ಟ ಮತದಾರರನ್ನು ಗುರುತಿಸಲಾಗಿದ್ದು, 11,61,231 ಜನರು ಯಾವುದೇ ಸುಳಿವು ಸಿಗದೆ ನಾಪತ್ತೆಯಾಗಿರುವುದು ಕಂಡುಬಂದಿದೆ. ಇದರ ಜೊತೆಗೆ 5,62,572 ನಕಲಿ ಅಥವಾ ಎರಡೆರಡು ಕಡೆ ಮತ ಹಕ್ಕು ಹೊಂದಿರುವವರನ್ನು ಹಾಗೂ ಸಹಿ ಮಾಡಲು ನಿರಾಕರಿಸಿದ 33,042 ಇತರ ಜನರನ್ನು ಕರಡು ಪಟ್ಟಿಯಿಂದ ಹೊರಗಿಡಲು ಪಟ್ಟಿ ಮಾಡಲಾಗಿದೆ.









