ಪುತ್ತೂರು: ತಾಲೂಕಿನ ನರಿಮೊಗರು ಗ್ರಾಮದ ಪುರುಷರಕಟ್ಟೆ–ಶಾಂತಿಗೋಡು ಆನಡ್ಕ ಮಾರ್ಗದ ಮಾಯಂಗಳದಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ಅನಧಿಕೃತವಾಗಿ ರಸ್ತೆ ತಡೆ ನಡೆಸಿದ ಆರೋಪದಡಿ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ 11 ಮಂದಿ ಹಾಗೂ ಇತರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜುಲೈ 27ರಂದು ಬೆಳಿಗ್ಗೆ ಕೆಲವರು ರಸ್ತೆ ತಡೆ ನಡೆಸಿ ವಾಹನ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುರೇಶ್ ಸಿ.ಟಿ. ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.ಈ ವೇಳೆ ಅರುಣ್ ಕುಮಾರ್ ಪುತ್ತಿಲ, ಮನೀಶ್ ಕುಲಾಲ್, ಅವಿನಾಶ್ ಜೋಗಿ, ಪ್ರೇಮರಾಜ್, ಪ್ರತೀಕ್ ಪುತ್ತಿಲ, ಶ್ರೀರಾಮ್ ಪಾತಾಳ, ಉಮೇಶ್ ಕೊಡಿಬೈಲು, ಅನಿಲ್ ತೆಂಕಿಲ, ರವಿಕುಮಾರ್ ರೈ, ಜಗದೀಶ್ ರೈ, ಪ್ರಶಾಂತ ನೆಕ್ಕಿಲಾಡಿ ಸೇರಿದಂತೆ ಸುಮಾರು 25ರಿಂದ 30 ಮಂದಿ ಯಾವುದೇ ಪೂರ್ವಾನುಮತಿ ಪಡೆಯದೆ ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ ನಡೆಸಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 93/2026 ದಾಖಲಿಸಿಕೊಂಡಿದ್ದು, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಕಲಂ 189(2) ಹಾಗೂ 126(2) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.









