ನಾಗರಹಾವು ಕಚ್ಚಿ ಅಸ್ವಸ್ಥಗೊಂಡ ವಿದ್ಯಾರ್ಥಿನಿ ಶಿಕ್ಷಕರೊಬ್ಬರ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಬದುಕುಳಿದಿದ್ದಾಳೆ. ಚಿತ್ರದುರ್ಗ ತಾಲೂಕಿನ ಹುಣಸೆಕಟ್ಟೆ ಸರ್ಕಾರಿ ಶಾಲೆಯ 1ನೇ ತರಗತಿ ಬಾಲಕಿ ಸೃಷ್ಟಿಯ ಕಾಲಿಗೆ ಶನಿವಾರ ನಾಗರಹಾವು ಕಚ್ಚಿದ್ದು ಶಿಕ್ಷಕ ರವಿಶಂಕರ್ ಅವರು ವಿಷ ಹೀರಿ ಹೊರಗೆ ಹಾಕಿ ಆಕೆಯನ್ನು ಪಾರು ಮಾಡಿದ್ದಾರೆ.

ತರಗತಿ ಮುಗಿಸಿ ಶಾಲಾ ಆವರಣದಲ್ಲಿ ಊಟ ಮಾಡುತ್ತಿದ್ದಾಗ ಸೃಷ್ಟಿಗೆ ನಾಗರಹಾವು ಕಚ್ಚಿದೆ. ಬಾಲಕಿ ಕಾಲಿನಿಂದ ರಕ್ತ ಬರುತ್ತಿದ್ದು, ಉರಿ ತಾಳಲಾರದೆ ಅಳುವುದನ್ನು ಕಂಡು ಶಿಕ್ಷಕರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ಮಕ್ಕಳು ಹಾವು ಕಚ್ಚಿದೆ ಎಂದು ತಿಳಿಸಿದ್ದಾರೆ. ತಕ್ಷಣ ಶಿಕ್ಷಕ ರವಿಶಂಕರ್‌ ಹಾವು ಕಚ್ಚಿದ ಜಾಗಕ್ಕೆ ಬಾಯಿ ಹಾಕಿ ವಿಷ ಹೀರಿ ಹೊರಗೆ ಹಾಕಿದ್ದಾರೆ. ಬಳಿಕ ಬಾಲಕಿಯ ಕಾಲಿಗೆ ಬಟ್ಟೆಯನ್ನು ಗಟ್ಟಿಯಾಗಿ ಬಿಗಿದು ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ.

ಪರಿಣಾಮ ಬಾಲಕಿ ಅಪಾಯದಿಂದ ಪಾರಾಗಿದ್ದು ವೈದ್ಯರು ಆಕೆಯನ್ನು ನಿಗಾದಲ್ಲಿರಿಸಿದ್ದಾರೆ. ಇತ್ತ ಹಾವಿನ ವಿಷ ಹೀರಿ ಹೊರಗೆ ಹಾಕಿದ್ದ ಶಿಕ್ಷಕ ರವಿಶಂಕರ್‌ ಕೂಡ ಅಸ್ವಸ್ಥಗೊಂಡಿದ್ದು ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಾಲಕಿ ಹಾಗೂ ಶಿಕ್ಷಕ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಡಿಡಿಪಿಐ ಮಂಜುನಾಥ್‌ ‘ಉದಯವಾಣಿ’ಗೆ ತಿಳಿಸಿದ್ದಾರೆ. ಬೃಹತ್‌ ಗಾತ್ರದ ನಾಗರಹಾವನ್ನು ಗ್ರಾಮಸ್ಥರು ಹಾಗೂ ಶಿಕ್ಷಕರು ಹಿಡಿದು ಹೊಡೆದು ಹಾಕಿದ್ದು, ಶಿಕ್ಷಕ ರವಿಶಂಕರ್ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!