ಹೊಸದಿಲ್ಲಿ,ಜು.27: ಹೆಚ್ಚಿನ ಕ್ರಿಯೇಟರ್‌ಗಳಿಗೆ ಆರು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳಿಸುವುದು ಒಂದು ದೊಡ್ಡ ಸಾಧನೆ. ಆದರೆ ದಿಲ್ಲಿ ಮೂಲದ ಕಂಟೆಂಟ್ ಕ್ರಿಯೇಟರ್ ಅಭಿನವ್ ಬಿಷ್ಟ್‌ಗೆ ಒಂದೇ ರಾತ್ರಿಯಲ್ಲಿ ಆ ಫಾಲೋವರ್ಸ್ ಕಳೆದುಕೊಂಡಿದ್ದೇ ದೊಡ್ಡ ಸುದ್ದಿಯಾಯಿತು.ಬಿಷ್ಟ್ ಅವರ ಟಿಕ್‌ಟಾಕ್ ಶೈಲಿಯ ಜಂತರ್ ಮಂತರ್ ಪ್ರತಿಭಟನೆಯ ವೀಡಿಯೊಗಳು ಇನ್‌ಸ್ಟಾಗ್ರಾಮ್‌ನಲ್ಲಿ ಅವರನ್ನು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರಿಯೇಟರ್‌ಗಳಲ್ಲಿ ಒಬ್ಬರನ್ನಾಗಿ ಮಾಡಿದ ಕೆಲವೇ ದಿನಗಳಲ್ಲಿ ಯಾವುದೇ ಪೂರ್ವ ಸೂಚನೆ ಇಲ್ಲದೆ ಅವರ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಈಗ ಅವರು ಹೊಸ ಪ್ರೊಫೈಲ್‌ನೊಂದಿಗೆ ಹಿಂತಿರುಗಿದ್ದು,ಅವರ ಫಾಲೋವರ್ಸ್‌ಗಳು ಕೂಡ ಅದೇ ವೇಗದಲ್ಲಿ ಮತ್ತೆ ಅವರ ಖಾತೆಗೆ ಮರಳುತ್ತಿದ್ದಾರೆ.ಸಿಜೆಪಿ ಪ್ರತಿಭಟನೆಯ ಇನ್‌ಸ್ಟಾಗ್ರಾಂ ರೀಲ್‌ಗಳ ಮೂಲಕ ವೈರಲ್ ಆಗಿದ್ದ ಬಿಷ್ಟ್,ಕೆಲವೇ ದಿನಗಳಲ್ಲಿ ತನ್ನ ಫಾಲೋವರ್‌ಗಳ ಸಂಖ್ಯೆಯನ್ನು ಸುಮಾರು 5 ಸಾವಿರದಿಂದ 6.35 ಲಕ್ಷಕ್ಕೆ ಹೆಚ್ಚಿಸಿಕೊಂಡಿದ್ದರು. ಈ ಕ್ರಿಯೇಟರ್ ಈಗ ಹೊಸ ಪ್ರೊಫೈಲ್ ಅನ್ನು ಪ್ರಾರಂಭಿಸಿದ್ದು ಕೆಲವೇ ಗಂಟೆಗಳಲ್ಲಿ ಸುಮಾರು 1.30 ಲಕ್ಷ ಫಾಲೋವರ್‌ಗಳನ್ನು ಆಕರ್ಷಿಸಿದ್ದಾರೆ.ಹಲವಾರು ಕ್ರಿಯೇಟರ್‌ಗಳು ಸಿಜೆಪಿಯ ಪ್ರತಿಭಟನೆಗಳನ್ನು ವರದಿ ಮಾಡಿದ್ದರೂ ಬಿಷ್ಟ್ ತನ್ನ ವಿಶಿಷ್ಟ ಶೈಲಿಯಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದರು. ರಾಜಕೀಯ ಭಾಷಣಗಳು ಅಥವಾ ಕಮೆಂಟ್‌ಗಳ ಮೇಲೆ ಗಮನ ಹರಿಸುವ ಬದಲು ಅವರು ಟ್ರೆಂಡಿಂಗ್ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಟಿಕ್‌ಟಾಕ್-ಪ್ರೇರಿತ ಫಾರ್ಮ್ಯಾಟ್‌ಗಳನ್ನು ಬಳಸಿ ಪ್ರತಿಭಟನಾ ಸ್ಥಳದ ರೋಚಕ ಕ್ಷಣಗಳನ್ನು ವೀಡಿಯೊ ಮಾಡಿದ್ದರು.ಅವರ ಹಾಸ್ಯಮಯ ಎಡಿಟ್‌ಗಳು ಮತ್ತು ಪ್ರತಿಭಟನಾಕಾರರೊಂದಿಗಿನ ಸಂಭಾಷಣೆಗಳು ಯುವ ಪ್ರೇಕ್ಷಕರನ್ನು ಆಕರ್ಷಿಸಿದ್ದವು,ಇದರಿಂದಾಗಿ ಅವರ ಹಲವಾರು ವೀಡಿಯೊಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದವು.ಆದರೆ ಈ ವೇಗದ ಬೆಳವಣಿಗೆ ಜುಲೈ 26 ರಂದು ದಿಢೀರನೆ ಸ್ಥಗಿತಗೊಂಡಿತು.ಯೂಟ್ಯೂಬ್‌ನಲ್ಲಿ ಲೈವ್‌ಸ್ಟ್ರೀಮ್ ಮಾಡುತ್ತಿರುವಾಗ ತನ್ನ ಇನ್‌ಸ್ಟಾಗ್ರಾಂ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎನ್ನುವುದು ಬಿಸ್ಟ್ ಅರಿವಿಗೆ ಬಂದಿತ್ತು. ಅವರ ಪ್ರಕಾರ,ಮೆಟಾ ಯಾವುದೇ ರೀತಿಯ ಪೂರ್ವ ಸೂಚನೆ ಅಥವಾ ಎಚ್ಚರಿಕೆ ಇಲ್ಲದೆ ಈ ಕ್ರಮ ಕೈಗೊಂಡಿತ್ತು.ಆದರೆ ಬಿಷ್ಟ್ ಸುಮ್ಮನೆ ಕುಳಿತುಕೊಳ್ಳಲಿಲ್ಲ.ಜುಲೈ 27ರ ಬೆಳಿಗ್ಗೆ ಅವರು ಹೊಸ ಇನ್‌ಸ್ಟಾಗ್ರಾಂ ಖಾತೆಯನ್ನು ಪ್ರಾರಂಭಿಸಿದರು. ತನ್ನ ಮೊದಲ ರೀಲ್‌ನಲ್ಲಿ,ತಮ್ಮ ಮೂಲ ಪ್ರೊಫೈಲ್ ಏಕೆ ಅಮಾನತುಗೊಂಡಿದೆ ಎಂದು ತನಗೆ ಇನ್ನೂ ತಿಳಿದಿಲ್ಲವೆಂದು ಫಾಲೋವರ್ಸ್‌ಗಳಿಗೆ ತಿಳಿಸಿದರು ಮತ್ತು ಈ ವಿಷಯವನ್ನು ಪ್ರಚಾರ ಮಾಡುವ ಮೂಲಕ ಖಾತೆಯನ್ನು ಮರಳಿ ಪಡೆಯಲು ಸಹಾಯ ಮಾಡುವಂತೆ ಮನವಿ ಮಾಡಿದರು.ಇನ್‌ಸ್ಟಾಗ್ರಾಂ ನೀಡಿದ ನೋಟಿಸ್‌ನ ಸ್ಕ್ರೀನ್ ರೆಕಾರ್ಡಿಂಗ್ ಅನ್ನು ಸಹ ಅವರು ಹಂಚಿಕೊಂಡಿದ್ದಾರೆ. ನಿರ್ಧಾರದ ಮರುಪರಿಶೀಲನೆಗಾಗಿ ಅವರು ಮೇಲ್ಮನವಿ ಸಲ್ಲಿಸಬಹುದು ಮತ್ತು 180 ದಿನಗಳ ಒಳಗೆ ಯಾವುದೇ ಮೇಲ್ಮನವಿ ಸಲ್ಲಿಸದಿದ್ದರೆ ಖಾತೆಯನ್ನು ಕಾಯಂ ಆಗಿ ನಿಷ್ಕ್ರಿಯಗೊಳಿಸಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!