ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ನಡುವಿನ ಭಿನ್ನಾಭಿಪ್ರಾಯದ ಪರಿಣಾಮವೇ ಅಶೋಕ್ ಕುಮಾರ್ ರೈ ಶಾಸಕತ್ವಕ್ಕೆ ಕಾರಣವಾಗಿದೆ. ಅಶೋಕ್ ರೈ ಅವರಿಗೆ ಶಾಸಕತ್ವ ಎಂಬುದು ಅರುಣ್ ಕುಮಾರ್ ಪುತ್ತಿಲ ನೀಡಿದ ‘ಭಿಕ್ಷೆ’ ಎಂದು ಪುತ್ತೂರು ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಆರೋಪಿಸಿದರು.ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಪುತ್ತಿಲ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಈ ಕುರಿತು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.‘ಬಿಜೆಪಿ ಅಂಗಡಿ ಬಂದಾಗಲಿದೆ’ ಎಂಬ ಶಾಸಕ ಅಶೋಕ್ ರೈ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಅವರೇ ಬಿಜೆಪಿಗೆ ಬರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಆಗ ಅವರು ಇರುವ ‘ಅಂಗಡಿ’ಯೇ ಬಂದಾಗಲಿದೆ ಎಂದು ವ್ಯಂಗ್ಯವಾಡಿದರು.ಅಶೋಕ್ ರೈ ಅವರು ತಾನು ಹೇಳಿದ್ದೇ ಸರಿ, ತಾನು ಮಾಡಿದ್ದೇ ಸರಿ ಎಂಬ ಧೋರಣೆ ಹೊಂದಿದ್ದಾರೆ ಎಂದು ಟೀಕಿಸಿದ ಅವರು, ಶಂಕರ ಆಳ್ವ, ರಾಮ ಭಟ್, ವಿನಯ ಕುಮಾರ್ ಸೊರಕೆ, ಡಿ.ವಿ. ಸದಾನಂದ ಗೌಡ, ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್ ಹಾಗೂ ಸಂಜೀವ ಮಠಂದೂರು ಅವರಂತಹ ಹಲವು ಶಾಸಕರನ್ನು ಕಂಡಿದ್ದೇವೆ. ಆದರೆ ಅಶೋಕ್ ರೈ ಅವರಂತಹ ಶಾಸಕರನ್ನು ನೋಡಿಲ್ಲ, ಇನ್ನು ನೋಡುವ ಅಗತ್ಯವೂ ಇಲ್ಲ ಎಂದು ಹೇಳಿದರು.‘ಬಿಜೆಪಿಗೆ ಈಗ ಹಿಂದೂ-ಮುಸ್ಲಿಂ ವಿಷಯ ಮಾತನಾಡಲು ಆಗುತ್ತಿಲ್ಲ. ಅದಕ್ಕಾಗಿ ರಸ್ತೆ ಬದಿಯ ಮಣ್ಣಿನ ರಾಶಿ ನೋಡಲು ಹೋಗುತ್ತಿದ್ದಾರೆ’ ಎಂಬ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 1947ರಲ್ಲಿ ದೇಶವನ್ನು ಹಿಂದೂ-ಮುಸ್ಲಿಂ ಆಧಾರದಲ್ಲಿ ವಿಭಜಿಸಿದ್ದು ಕಾಂಗ್ರೆಸ್ ಪಕ್ಷವೇ. ಆಗ ಬಿಜೆಪಿ ಅಸ್ತಿತ್ವದಲ್ಲಿಯೇ ಇರಲಿಲ್ಲ ಎಂದು ಹೇಳಿದರು.ಮೆಡಿಕಲ್ ಕಾಲೇಜಿಗೆ ಮಂಜೂರಾದ ಸೇಡಿಯಾಪು ಜಾಗದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದಿರುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಆರೋಪಿಸಿದ ಅವರು, ಹಾರಾಡಿ ಕಾಂಕ್ರೀಟ್ ರಸ್ತೆ ಕಾಮಗಾರಿಯ ಲೋಪಗಳನ್ನು ಪರಿಶೀಲಿಸಲು ಬಿಜೆಪಿ ಭೇಟಿ ನೀಡಿದ್ದನ್ನು ಶಾಸಕರು ಲೇವಡಿ ಮಾಡಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ ವಿದ್ಯಾಗೌರಿ, ಯುವರಾಜ್ ಪೆರೆಯತ್ತೋಡಿ, ಮಹೇಶ್ ಕೇರಿ, ಸತೀಶ್ ನಾಯ್ಕ್ ಪರ್ಲಡ್ಕ ಹಾಗೂ ಲೋಕೇಶ್ ಚಾಕೋಟೆ ಉಪಸ್ಥಿತರಿದ್ದರು.









