ದ್ವಿತೀಯ ಪಿಯುಸಿ (Puc) ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಥವಾ ತಮ್ಮ ಫಲಿತಾಂಶವನ್ನು ಸುಧಾರಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ (Students) ಇನ್ನು ಮುಂದೆ ಎರಡು ವರ್ಷಗಳೊಳಗೆ ಮಾತ್ರ ಮರುಪರೀಕ್ಷೆ (Exam) ಬರೆಯುವ ಅವಕಾಶ ಇರಲಿದೆ.

ಈ ಕುರಿತು ಕರ್ನಾಟಕ ಶಿಕ್ಷಣ ಇಲಾಖೆ (Education dept) ಹೊಸ ನಿಯಮ ಜಾರಿಗೊಳಿಸಿ ಆದೇಶ ಹೊರಡಿಸಿದೆ.

ಹೊಸ ನಿಯಮದ ಪ್ರಕಾರ, ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡ ವರ್ಷ ಹಾಗೂ ಅದರ ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಪರೀಕ್ಷೆಗಳಲ್ಲೇ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಬೇಕು. ಈ ಎರಡು ವರ್ಷದ ಅವಧಿ ಮೀರಿದ ಬಳಿಕ ಮರುಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ವರ್ಷಕ್ಕೆ ಮೂರು ಪರೀಕ್ಷೆಗಳು – ಎರಡು ವರ್ಷದಲ್ಲಿ ಆರು ಅವಕಾಶ

ಪ್ರಸ್ತುತ ವ್ಯವಸ್ಥೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಮೂರು ಬಾರಿ ಪರೀಕ್ಷೆ (Exam-1, Exam-2, Exam-3) ಬರೆಯುವ ಅವಕಾಶ ನೀಡಲಾಗಿದೆ. ಹೊಸ ನಿಯಮದಂತೆ ವಿದ್ಯಾರ್ಥಿಗಳು ಎರಡು ವರ್ಷಗಳಲ್ಲಿ ಒಟ್ಟು ಆರು ಬಾರಿ ಪರೀಕ್ಷೆ ಬರೆಯಬಹುದು, ಆದರೆ ಈ ಎಲ್ಲಾ ಪ್ರಯತ್ನಗಳು ನೋಂದಣಿ ಮಾಡಿದ ವರ್ಷ ಮತ್ತು ಅದರ ಮುಂದಿನ ವರ್ಷದಲ್ಲೇ ಪೂರ್ಣಗೊಳ್ಳಬೇಕು.

ಹಳೆಯ ನಿಯಮ ಏನು?

ಈ ಹಿಂದೆ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಅಥವಾ ಫಲಿತಾಂಶ ಸುಧಾರಿಸಲು ಬಯಸಿದವರು ಆರು ಬಾರಿ ಪರೀಕ್ಷೆ ಬರೆಯಲು ಅವಕಾಶ ಹೊಂದಿದ್ದರು, ಆದರೆ ಅದಕ್ಕೆ ಯಾವುದೇ ಕಾಲಮಿತಿ ಇರಲಿಲ್ಲ. ಕೆಲವರು ಹಲವು ವರ್ಷಗಳ ಬಳಿಕವೂ ಮರುಪರೀಕ್ಷೆ ಬರೆಯುತ್ತಿದ್ದರೆಂಬುದು ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿತ್ತು.

ನಿಯಮ ಬದಲಾವಣೆಗೆ ಕಾರಣ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಪ್ರಕಾರ, ಮರುಪರೀಕ್ಷೆಗಳಿಗೆ ಅನಿಯಮಿತ ಅವಕಾಶ ಇರುವುದರಿಂದ ವಿದ್ಯಾರ್ಥಿಗಳ ಮಾಹಿತಿಯನ್ನು ನಿರ್ವಹಿಸುವುದು, ಅಂಕಪಟ್ಟಿಗಳನ್ನು ಮುದ್ರಿಸುವುದು ಮತ್ತು ಹಳೆಯ ಅಂಕಪಟ್ಟಿಗಳನ್ನು ಹಿಂಪಡೆಯುವಂತಹ ಆಡಳಿತಾತ್ಮಕ ಸಮಸ್ಯೆಗಳು ಎದುರಾಗುತ್ತಿದ್ದವು.

ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಎರಡು ವರ್ಷದ ಮಿತಿ ವಿಧಿಸುವಂತೆ ಮಂಡಳಿ ಶಿಫಾರಸು ಮಾಡಿತ್ತು.
ಈ ಹೊಸ ನಿಯಮವು ರೆಗ್ಯುಲರ್‌, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೂ ಅನ್ವಯವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ನೂತನ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಅವಧಿಯಲ್ಲಿ ಫಲಿತಾಂಶ ಸುಧಾರಿಸಿಕೊಳ್ಳಲು ಅವಕಾಶ ದೊರೆಯುವ ಜೊತೆಗೆ ಪರೀಕ್ಷಾ ವ್ಯವಸ್ಥೆಯ ನಿರ್ವಹಣೆಯೂ ಸುಗಮವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!