ಹಿರಿಯ ಕಾಂಗ್ರೆಸ್ ಮುಖಂಡ ವೆಂಕಟಮುನಿಯಪ್ಪ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶದ ಮಾತನಾಡಿದ್ದಾರೆ. ಕೋಲಾರದ ಟಿ.ಚನ್ನಯ್ಯ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪರೋಕ್ಷವಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
2023ರ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳದ ರಮೇಶ್ ಕುಮಾರ್, ನಾನು ಇನ್ಮುಂದೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳಲ್ಲ. ಜೀವನದಲ್ಲಿ ಸೋತಿದ್ದೇನೆ, ಬದುಕಿನಲ್ಲೂ ಸೋತಾಗಿದೆ. ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರೆ ಮತ್ತೆ ರಾಜಕೀಯ ಮಾಡ್ತಾರೆ ಎನ್ನಬಹುದು ಎಂದಿದ್ದಾರೆ.
ಬಿಳಿ ಶರ್ಟ್ ಹಾಕಿಕೊಂಡು ನಾನೂ ಕಾಣಿಸಬಹುದಿತ್ತು. ಆದ್ರೆ ಜೀವನದಲ್ಲಿ ಸೋತೆ, ಚುನಾವಣೆಯಲ್ಲಿ ಸೋತೆ. ನಾಲ್ಕಾಗಿತ್ತು, ಇದೀಗ 5 ನೇ ಬಾರಿ ಸೋತೆ. ಚುನಾವಣೆಯಲ್ಲಿ ಯಾಕೆ ಸೋತೆ ಅಂದ್ರೆ ನಂಬಿಕೆ ದ್ರೋಹ, ಜೊತೆಗಿದ್ದು ಬೆನ್ನಿಗೆ ಚೂರಿ ಹಾಕಿದ್ರು. ಊಟಕ್ಕೆ ಕರೆದು ವಿಷ ಹಾಕಿದ್ರು ಎಂದಿದ್ದಾರೆ.
ನನ್ನ ಜೀವನದಲ್ಲಿ ನಾಲ್ಕನೇ ಗುಂಪಿಗೆ ಹೆಚ್ಚು ಪ್ರಾಮುಖ್ಯತೆ ನೀಡುವೆ ಎಂದಿರುವ ರಮೇಶ್ ಕುಮಾರ್, ಅವರು ಊಟಕ್ಕೆ ಕರೆದು ವಿಷ ಹಾಕಿದೋರು, ಭುಜದ ಮೇಲೆ ಕೈ ಹಾಕಿ ಬೆನ್ನ ಹಿಂದೆ ತಿವಿದವರು, ಜೊತೆಯಲ್ಲಿ ಇದ್ದು ಕಾಲಿಗೆ ಅಡ್ಡ ಇಟ್ಟು ಬೀಳಿಸಿದವರು.ದೇವರಿಗೆ ನಮಸ್ಕಾರ ಮಾಡಲು ಮಲಗಿದ್ದಾಗ ಕತ್ತಿಗೆ ಕತ್ತಿ ಇಟ್ಟವರಿಗೆ ಕೃತಜ್ಞತೆ ಅರ್ಪಿಸುತ್ತೇನೆ.ಭಗವಂತ ಅವರನ್ನ ಕಾಪಾಡಲಿ ಎಂದಿದ್ದಾರೆ.
ನಮ್ಮಂತ ದುಷ್ಟರನ್ನ ಅವರು ಮಂಥನ ಮಾಡುತ್ತಾ ಇರಲಿ, ಈ ದೇಶ ಚೆನ್ನಾಗಿರಲಿ ಎಂದು ವ್ಯಂಗ್ಯವಾಗಿ ಹೇಳಿರುವ ರಮೇಶ್ ಕುಮಾರ್, ಯಾರೊಬ್ಬರ ಹೆಸರನ್ನೂ ಹೇಳದೆ ತಮ್ಮ ಸೋಲಿಗೆ ಕಾರಣರಾದವರನ್ನ ನೆನೆದಿದ್ದಾರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್.ಮುಂದೆ ಇರ್ತೀನೊ ಇಲ್ವೊ, ಅನ್ನೋ ಕಾರಣಕ್ಕೆ ಕಾರ್ಯಕ್ರಮಕ್ಕೆ ಬಂದೆ ಅಷ್ಟೆ ಎಂದಿದ್ದಾರೆ.