
ಪುತ್ತೂರು: ಮಹಿಳಾ ದಿನಾಚರಣೆ ಕಾರ್ಯಕ್ರಮವೆಂಬ ನಿಟ್ಟಿನಲ್ಲಿ ನಟರಾಜ ವೇದಿಕೆಯನ್ನು ಬಳಸಲು ಅನುಮತಿ ನೀಡಲಾಗಿದ್ದು, ದೇವಳದಲ್ಲಿ ಯಾವುದೇ ರೀತಿಯ ರಾಜಕೀಯ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಸ್ಪಷ್ಟಪಡಿಸಿದ್ದಾರೆ.
ಮಹಿಳಾ ದಿನಾಚರಣೆಯ ಅಂಗವಾಗಿ ‘ಮಹಿಳಾ ಸಂಘಟನಾ ಸಂಭ್ರಮ’ ಕಾರ್ಯಕ್ರಮವನ್ನು ನಡೆಸಲು ದೇವಳಕ್ಕೆ ಅರ್ಜಿ ಬಂದಿದ್ದು, ಅದನ್ನು ಮಹಿಳಾ ದಿನಾಚರಣೆ ಕಾರ್ಯಕ್ರಮವೆಂದು ಪರಿಗಣಿಸಿ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ, ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡಿದ ವೇಳೆ ‘ಮಹಿಳಾ ಸಂಘಟನಾ ಸಂಭ್ರಮ’ ಬ್ಯಾನರ್‌ನಲ್ಲಿ ಕಾಂಗ್ರೆಸ್ ಹೆಸರು ಕಂಡುಬಂದ ಹಿನ್ನೆಲೆಯಲ್ಲಿ ತಕ್ಷಣವೇ ಅಲ್ಲಿಂದ ನಿರ್ಗಮಿಸಿದ್ದು, ಕಾರ್ಯಕ್ರಮ ಆಯೋಜಕರಿಗೆ ನೋಟಿಸ್ ನೀಡುವಂತೆ ದೇವಳದ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ದೇವಳದ ವೇದಿಕೆಯಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಕಾರ್ಯಕ್ರಮ ನಡೆಯಲು ಅವಕಾಶವಿಲ್ಲ ಎಂಬುದು ಸಮಿತಿಯ ಸ್ಪಷ್ಟ ನಿಲುವು ಎಂದು ಈಶ್ವರ ಭಟ್ ಹೇಳಿದ್ದಾರೆ.









