ಪುತ್ತೂರು: ಗ್ರಾಮಾಂತರ ಪ್ರದೇಶಕ್ಕೆ ಒತ್ತು ನೀಡುವ ಉದ್ದೇಶದಿಂದ ನಗರ ಭಾಗವನ್ನು ಬಿಟ್ಟು ಗ್ರಾಮೀಣ ಪ್ರದೇಶವಾದ ಸೇಡಿಯಾಪುವಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಯೋಜಿಸಲಾಗಿದೆ ಎಂದು ಸ್ಥಳೀಯ ನಿವಾಸಿ ಜಯಪ್ರಕಾಶ್ ಬದಿನಾರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಅವಧಿಯಲ್ಲಿ 40 ಎಕರೆ ಜಾಗವನ್ನು ಮೆಡಿಕಲ್ ಕಾಲೇಜಿಗೆ ಗುರುತಿಸಲಾಗಿತ್ತು. ನಂತರ ಶಾಸಕ ಸಂಜೀವ ಮಠಂದೂರು ಅವರು ಅದೇ ಜಾಗದಲ್ಲಿ ಸೀಫುಡ್ ತಯಾರಿಕಾ ಘಟಕ ಆರಂಭಿಸಲು ಮುಂದಾದಾಗ ಸಾರ್ವಜನಿಕ ವಿರೋಧ ವ್ಯಕ್ತವಾಗಿ ಯೋಜನೆ ಕೈಬಿಡಲಾಯಿತು ಎಂದು ಹೇಳಿದರು.
ಹಾಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಮೆಡಿಕಲ್ ಕಾಲೇಜು ಕನಸಿಗೆ ಪುನರ್ಜನ್ಮ ನೀಡಿದ್ದಾರೆ. ಸೇಡಿಯಾಪುವಿನಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, 300 ಹಾಸಿಗೆಗಳ ಆಸ್ಪತ್ರೆಯೂ ನಿರ್ಮಾಣವಾಗಲಿದೆ. ಆದರೆ ಬಿಜೆಪಿಯವರು ಆಸ್ಪತ್ರೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಆಸ್ಪತ್ರೆಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳು ಸೇಡಿಯಾಪುವಿನಲ್ಲಿ ಲಭ್ಯವಿವೆ. ಅಭಿವೃದ್ಧಿಯನ್ನು ಸಹಿಸದ ಕೆಲವರು ಜನರನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ವಿಶ್ವಪ್ರಸಾದ್ ಸೇಡಿಯಾಪು ಮಾತನಾಡಿ, ಅಧಿಕಾರಿಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ ಮಣ್ಣು ಪರೀಕ್ಷೆ ಮಾಡಿದ್ದಾರೆ. ಡ್ರೋನ್ ಸಮೀಕ್ಷೆಯೂ ನಡೆದಿದ್ದು, ಕಟ್ಟಡದ ಪ್ರಾಥಮಿಕ ವಿನ್ಯಾಸ ಸಿದ್ಧವಾಗಿದೆ. ಸ್ಥಳಕ್ಕೆ ಎಲ್ಲ ದಿಕ್ಕಿನಿಂದಲೂ ಸಂಪರ್ಕ ರಸ್ತೆ ವ್ಯವಸ್ಥೆ ಇದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಮುಂದಾಳು ಎ. ಜತೀಂದ್ರ ಶೆಟ್ಟಿ ಅಳಿಮರ ಮತ್ತು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಆಸ್ಕರ್ ಆನಂದ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!