
ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಪರಿಸರದ ಗ್ಯಾರೇಜ್‌ನಲ್ಲಿ ನಡೆದ ವಾಹನಗಳ ಬಿಡಿಭಾಗ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿ, ಓರ್ವ ಆರೋಪಿಯನ್ನು ಬಂಧಿಸಿ ಕಳವು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಫೆ. 14/15ರ ಮಧ್ಯರಾತ್ರಿ ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿಯ ಸಮೀಪದ ‘ಫ್ರೆಂಡ್ಸ್ ಗ್ಯಾರೇಜ್’ ಬಳಿ ಲಾರಿಯನ್ನು ನಿಲ್ಲಿಸಿದ್ದ ಚಾಲಕನು, ದುರಸ್ತಿಗಾಗಿ ಗ್ಯಾರೇಜ್‌ನಲ್ಲಿ ನಿಲ್ಲಿಸಲಾಗಿದ್ದ ಎರಡು ಭಾರೀ ವಾಹನಗಳ ಬಿಡಿಭಾಗಗಳನ್ನು ಕಳವು ಮಾಡಿ ಲಾರಿಯಲ್ಲಿ ಸಾಗಿಸಿದ್ದಾನೆ ಎಂದು ಗ್ಯಾರೇಜ್ ಮಾಲೀಕರ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಸುರತ್ಕಲ್ ಪೊಲೀಸರು ಲಾರಿ ಚಾಲಕ ಮುಖೇಶ್ ದಾಸ್ (46), ಶ್ರೀನಿವಾಸ ನಗರ, ಬನಶಂಕರಿ, ಬೆಂಗಳೂರು (ಖಾಯಂ ವಿಳಾಸ: ಜೋಧ್‌ಪುರ್, ರಾಜಸ್ಥಾನ) ಅವರನ್ನು ಬಂಧಿಸಿದ್ದಾರೆ. ಆರೋಪಿ ವಶದಿಂದ ರೂ.96,000 ಮೌಲ್ಯದ ಬಿಡಿಭಾಗಗಳು ಹಾಗೂ ಕೃತ್ಯಕ್ಕೆ ಬಳಸಿದ KA-02-AM-2335 ಸಂಖ್ಯೆಯ ಈಚರ್ ಲಾರಿ ಸೇರಿ ಒಟ್ಟು ರೂ.15.96 ಲಕ್ಷ ಮೌಲ್ಯದ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.









