
ಬಂಟ್ವಾಳ, ಮಾ.11: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಭಗವಂತ ಕೋಡಿ ಪ್ರದೇಶದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿ, ₹1,79,700 ಮೌಲ್ಯದ 17.97 ಗ್ರಾಂ ಎಂಡಿಎಂಎ (MDMA) ವಶಪಡಿಸಿಕೊಳ್ಳಲಾಗಿದೆ.
ನೇರಳಕಟ್ಟೆ ಇಂದಿರಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಅಶ್ರಫ್ ಜಿ ಎಂಬಾತನು ತನ್ನ ಮನೆಯಲ್ಲಿ ಎಂಡಿಎಂಎ ಸಂಗ್ರಹಿಸಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ತನಿಖೆ-1) ರತ್ನಕುಮಾರ್ ಎಂ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದರು.
ದಾಳಿಯ ವೇಳೆ ಅಶ್ರಫ್ ಜಿ (38) ಮನೆಯಲ್ಲಿದ್ದು, ಹಫೀಝ್ ಯಾನೆ ಅಪ್ಪಿ, ಅಫ್ವಾನ್ ಹಾಗೂ ಅಶ್ರಫ್ ಎನ್.ಎ. ಅವರೂ ಅಲ್ಲಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಪರಿಶೀಲನೆ ವೇಳೆ ಒಟ್ಟು 17.97 ಗ್ರಾಂ ತೂಕದ ಎಂಡಿಎಂಎ, ಒಂದು ಚೂರಿ ಹಾಗೂ ಇತರೆ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 61/2026ರಂತೆ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 8(C), 22(C) ಮತ್ತು ಆರ್ಮ್ಸ್ ಆಕ್ಟ್ ಕಲಂ 27ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.









