ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಇಂದು ಅತ್ಯಂತ ಮಹತ್ವದ ದಿನ. ಕಳೆದ 12 ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ (Vegetative State) ಉತ್ತರ ಪ್ರದೇಶದ 32 ವರ್ಷದ ಯುವಕನಿಗೆ ‘ದಯಾಮರಣ’ (Euthanasia) ನೀಡಲು ಸುಪ್ರೀಂ ಕೋರ್ಟ್ ಬುಧವಾರದಂದು ಐತಿಹಾಸಿಕ ಆದೇಶ ಹೊರಡಿಸಿದೆ.

ಇದು ಭಾರತದಲ್ಲಿ ಅಧಿಕೃತವಾಗಿ ದಯಾಮರಣಕ್ಕೆ ಅನುಮತಿ ನೀಡಿದ ಮೊದಲ ಪ್ರಕರಣವಾಗಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಈ ಯುವಕ, 12 ವರ್ಷಗಳ ಹಿಂದೆ ಕಟ್ಟಡವೊಂದರಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದನು. ಅಂದಿನಿಂದ ಆತ ಸಂಪೂರ್ಣವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಕೇವಲ ಯಂತ್ರೋಪಕರಣಗಳ ಸಹಾಯದಿಂದ ಜೀವ ಹಿಡಿದಿದ್ದನು. ಆತನ ಚೇತರಿಕೆಯ ಯಾವುದೇ ಸಾಧ್ಯತೆ ಇಲ್ಲದ ಕಾರಣ, ಮಗನ ನರಳಾಟವನ್ನು ನೋಡಲಾರದೆ ಆತನ ತಂದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. “ನನ್ನ ಮಗನಿಗೆ ಘನತೆಯಿಂದ ಸಾಯುವ ಹಕ್ಕನ್ನು ನೀಡಬೇಕು” ಎಂದು ಅವರು ಅರ್ಜಿಯಲ್ಲಿ ವಿನಂತಿಸಿದ್ದರು.ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಹರೀಶ್ ರಾಣಾ 2013 ರಲ್ಲಿ ಪೇಯಿಂಗ್ ಗೆಸ್ಟ್ ವಸತಿಗೃಹದ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡರು. ಅವರಿಗೆ ಜೀವರಕ್ಷಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂದಿನಿಂದ, ಅವರು ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಆಹಾರಕ್ಕಾಗಿ ಗ್ಯಾಸ್ಟ್ರೋಜೆಜುನೊಸ್ಟೊಮಿ ಟ್ಯೂಬ್ ಹೊಂದಿರುವ ಹಾಸಿಗೆಗೆ ಸೀಮಿತರಾಗಿದ್ದಾರೆ.
ಸುಪ್ರೀಂ ಕೋರ್ಟ್‌ನ ತೀರ್ಪು

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶ ನೀಡಿದೆ. 2018ರ ‘ಕಾಮನ್ ಕಾಸ್’ ತೀರ್ಪು ಮತ್ತು 2023ರ ಪರಿಷ್ಕೃತ ಮಾರ್ಗಸೂಚಿಗಳ ಅಡಿಯಲ್ಲಿ, “ಘನತೆಯಿಂದ ಸಾಯುವುದು ಮೂಲಭೂತ ಹಕ್ಕು” ಎಂಬುದನ್ನು ನ್ಯಾಯಾಲಯ ಎತ್ತಿಹಿಡಿದಿದೆ.ಜೀವ ರಕ್ಷಕ ವ್ಯವಸ್ಥೆ ಹಂತ ಸ್ಥಗಿತ: ಯುವಕನಿಗೆ ನೀಡಲಾಗುತ್ತಿರುವ ಎಲ್ಲಾ ಜೀವ ರಕ್ಷಕ ಚಿಕಿತ್ಸೆಗಳನ್ನು (Life-sustaining treatment) ಸ್ಥಗಿತಗೊಳಿಸಲು ಆಸ್ಪತ್ರೆಗೆ ಸೂಚಿಸಲಾಗಿದೆ.ವೈದ್ಯಕೀಯ ವರದಿ: ಯುವಕನ ಸ್ಥಿತಿ ಅಸ್ಥಿರವಾಗಿದ್ದು, ಮರಳಿ ಬರುವ ಸಾಧ್ಯತೆ ಇಲ್ಲ ಎಂಬ ವೈದ್ಯಕೀಯ ಮಂಡಳಿಯ ವರದಿಯನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದಯಾಮರಣ ಎಂದರೇನು?

ದಯಾಮರಣದಲ್ಲಿ ಎರಡು ವಿಧಗಳಿದ್ದು, ಇಲ್ಲಿ ಅನುಮತಿ ನೀಡಿರುವುದು ‘ಪ್ಯಾಸಿವ್ ಯುಥಾನೇಷಿಯಾ’ (Passive Euthanasia) ಅಂದರೆ ಅಕ್ರಿಯ ಕಾರುಣ್ಯ ಮರಣಕ್ಕೆ. ಇದರಲ್ಲಿ ರೋಗಿಯನ್ನು ಬದುಕಿಸಲು ನೀಡಲಾಗುವ ಕೃತಕ ಉಸಿರಾಟ ಅಥವಾ ಜೀವ ರಕ್ಷಕ ವ್ಯವಸ್ಥೆಯನ್ನು ಹಿಂಪಡೆಯುವ ಮೂಲಕ ಸ್ವಾಭಾವಿಕ ಸಾವಿಗೆ ಅವಕಾಶ ಮಾಡಿಕೊಡಲಾಗುತ್ತದೆ.
ತೀರ್ಪಿನ ಮಹತ್ವ!

ಈ ತೀರ್ಪು ಭವಿಷ್ಯದಲ್ಲಿ ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವ ಮತ್ತು ವರ್ಷಗಟ್ಟಲೆ ಯಂತ್ರಗಳ ಸಹಾಯದಿಂದ ನರಳುತ್ತಿರುವ ರೋಗಿಗಳ ಕುಟುಂಬಗಳಿಗೆ ದಾರಿದೀಪವಾಗಲಿದೆ. ಮನುಷ್ಯನಿಗೆ ಬದುಕುವ ಹಕ್ಕು ಇರುವಂತೆ, ಘನತೆಯಿಂದ ಸಾಯುವ ಹಕ್ಕೂ ಇದೆ ಎಂಬುದನ್ನು ಭಾರತದ ಅತ್ಯುನ್ನತ ನ್ಯಾಯಾಲಯ ಮತ್ತೊಮ್ಮೆ ಸ್ಪಷ್ಟಪಡಿಸಿದೆ,

Leave a Reply

Your email address will not be published. Required fields are marked *

Join WhatsApp Group
error: Content is protected !!