ಉದ್ಯಮಿ ಮುಮ್ತಾಝ್ ಅಲಿ ಪ್ರಕರಣದಲ್ಲಿ ಮೊದಲ ಆರೋಪಿ ಹೊರತು ಪಡಿಸಿ ಉಳಿದ ಐವರು ಆರೋಪಿಗಳಿಗೆ ಕರ್ನಾಟಕ ಉಚ್ಛ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ಮೊದಲ ಆರೋಪಿ ರೆಹಮತ್ ಎಂಬಾಕೆಯನ್ನು ಹೊರತುಪಡಿಸಿ ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ರೆಹಮತ್‌ಳ ಪತಿ ಪ್ರಕರಣದ 5ನೇ ಆರೋಪಿ ಶುಐಬ್‌, ಪ್ರಕರಣ ಎರಡನೇ ಆರೋಪಿ ಅಬ್ದುಲ್‌ ಸತ್ತಾರ್‌, ಮೂರನೇ ಆರೋಪಿ ನಂದಾವರ ನಿವಾಸಿ ಕಲಂದರ್ ಶಾಫಿ, 4ನೇ ಆರೋಪಿ ಕೃಷ್ಣಾಪುರ ನಿವಾಸಿ ಮುಸ್ತಫಾ ಹಾಗೂ 6ನೇ ಆರೋಪಿ ಸತ್ತಾರ್ ನ ಕಾರು ಚಾಲಕ ಸಿರಾಜ್‌ಗೆ ಉಚ್ಛ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

2024ರ ಅ.7ರಂದು ಮುಮ್ತಾಝ್ ಅಲಿ ಅವರ ಕಾರು ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಕೂಳೂರು ಸೇತುವೆಯಲ್ಲಿ ಪತ್ತೆಯಾಗಿತ್ತು. ಅವರು ಫಲ್ಗುಣಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಮಗಳು ನಾಪತ್ತೆ ಪ್ರಕರಣ ದಾಖಲಿಸಿದ್ದರೆ, ಸಹೋದರ ಹೈದರ್‌ ಅಲಿ ಅವರು, ರೆಹಮತ್, ಅಬ್ದುಲ್ ಸತ್ತಾರ್, ಕಲಂದರ್ ಶಾಫಿ, ಮುಸ್ತಫಾ, ಶುಐಬ್‌, ಸಿರಾಜ್ ಎಂಬವರು ಮಾನಸಿಕ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿರುವ ಕುರಿತು ಶಂಕೆ ವ್ಯಕ್ತ ಪಡಿಸಿ ದೂರು ನೀಡಿದ್ದರು.

ಅವರ ದೂರು ಆಧರಿಸಿ ಐಪಿಸಿ 308(2), 308(5), 352, 351(2) 190 BNS ಕಾಯ್ದೆಯಡಿ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಕೂಳೂರು ನದಿಯಲ್ಲಿ ಹುಡುಕಾಟ ಆರಂಭಿಸಲಾಗಿತ್ತು.‌ ಅ.8ರಂದು ಮುಮ್ತಾಝ್ ಅಲಿ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ 2255 ಪುಟಗಳ ಆರೋಪಪಟ್ಟಿಯನ್ನು ಕಾವೂರು ಪೊಲೀಸರು ಮಂಗಳೂರು 3ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ, ಆರೋಪಿಗಳು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಆರೋಪಿಗಳ ಪೈಕಿ ಮೂವರನ್ನು ಹೆಚ್ಚುವರಿ ತನಿಖೆಗೆ ನೀಡುವಂತೆ ತನಿಖಾಧಿಕಾರಿ ಸುರತ್ಕಲ್‌ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌ ನೇತೃತ್ವದದ ತಂಡ ಹೈಕೋರ್ಟ್‌ ಮೊರೆಹೋಗಿತ್ತು. ಆದರೆ ಹೆಚ್ಚುವರಿ ಕಸ್ಟಡಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು.

Leave a Reply

Your email address will not be published. Required fields are marked *

Join WhatsApp Group
error: Content is protected !!