ಒಂದೇ ಕಟುಂಬದ ನಾಲ್ವರು ಮತ್ತು ಪ್ರೇಯಸಿಯನ್ನು ಭೀಕರವಾಗಿ ಸುತ್ತಿಗೆಯಿಂದ ಹತ್ಯೆಗೈದ ಅಫಾನ್ (23) ಸದ್ಯ ಕೇರಳ ಪೊಲೀಸರ ಕಸ್ಟಡಿಯಲ್ಲಿ ತನಿಖೆಗೆ ಒಳಪಟ್ಟಿದ್ದಾನೆ. ಕೇರಳದ ವೆಂಜರಮೂಡು ಹತ್ಯಾಕಾಂಡ ಪ್ರಕರಣದ ಆರೋಪಿಯಾಗಿರುವ ಅಫಾನ್ ಮುಖವನ್ನು ನೋಡಲು ಇಷ್ಟವಿಲ್ಲ ಎಂದು ಆತನ ತಂದೆ ರಹೀಮ್ ಹೇಳಿದ್ದಾರೆ.

ಮಗ ಮಾಡಿರುವ ಕಾರ್ಯ ತುಂಬ ದೊಡ್ಡದು. ಅವನಿಂದ ನನ್ನ ಕುಟುಂಬವೇ ಸರ್ವನಾಶವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.

ತನ್ನ ಅಜ್ಜಿ, ಕಿರಿಯ ಸಹೋದರ, ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಪ್ರೇಯಸಿ ಫರ್ಸಾನಾಳ ಸಾವಿಗೆ ಕಾರಣನಾದ ಅಫಾನ್, ಎಲ್ಲರನ್ನೂ ಒಂದೇ ಒಂದು ಸುತ್ತಿಗೆಯಿಂದ ಭೀಕರವಾಗಿ ಹತ್ಯೆಗೈದಿದ್ದ. ಈ ವೇಳೆ ತನ್ನ ತಾಯಿ ಶೆಮಿಗೂ ಮನಬಂದಂತೆ ಥಳಿಸಿದ್ದ. ಆದರೆ, ಪವಾಡದಂತೆ ಅಫಾನ್ ತಾಯಿ ಬದುಕುಳಿದಿದ್ದಾರೆ. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಹಲವು ದಿನಗಳ ಚಿಕಿತ್ಸೆ ನಂತರ ಈಗ ಗುಣಮುಖದ ಹಾದಿ ಹಿಡಿದಿರುವ ಶೆಮಿ, ತನ್ನ ಮಗನೇ ಹೀಗೆಲ್ಲ ಮಾಡಿರುವುದನ್ನು ಕೇಳಿ ಅಚ್ಚರಿಗೆ ಒಳಗಾಗಿದ್ದಾರೆ.

‘ಎರಡು ದಿನಗಳ ನಂತರವೇ ನಾನು ಕುಟುಂಬಸ್ಥರ ಸಾವಿನ ಬಗ್ಗೆ ಆಕೆಗೆ ಮಾಹಿತಿ ನೀಡಿದೆ. ಈ ವಿಚಾರದಿಂದ ಶಾಕ್ ಆದ ಪತ್ನಿ, ಇಂಥಾ ಕೃತ್ಯ ಎಸಗಲು ಅವನಿಂದ ಸಾಧ್ಯವೇ ಇಲ್ಲ ಎಂದಳು. ಒಂದು ಜಿರಳೆಗೆ ಹೆದರುತ್ತಿದ್ದ ಹುಡುಗ ಇದನ್ನೆಲ್ಲಾ ಹೇಗೆ ಮಾಡಲು ಸಾಧ್ಯ ಎಂಬುದನ್ನು ನಂಬುವುದೇ ಕಷ್ಟವಾಗಿದೆ’ ಎಂದು ರಹೀಮ್ ಹೇಳಿದ್ದಾರೆ. ‘ಸೌದಿ ಅರೇಬಿಯಾದಲ್ಲಿ ಎರಡು ದಿನ ಜೈಲಿನಲ್ಲಿ ಕಳೆದ ನಂತರ ನಾನು ಒಂದು ಪೈಸೆಯೂ ಇಲ್ಲದೆ ನನ್ನ ದೇಶಕ್ಕೆ ವಾಪಾಸ್ ಬರುವಂತಾಯಿತು. ನಾವು ನಮ್ಮ ಮಕ್ಕಳಿಗಾಗಿ ಬದುಕುತ್ತೇವೆ. ಆದರೆ, ಈಗ ಅವರೇ ಇಲ್ಲ. ನನಗೆ ಸೌದಿ ಅರೇಬಿಯಾದಲ್ಲಿ ಸುಮಾರು 10 ಲಕ್ಷ ರೂಪಾಯಿ ಸಾಲವಿತ್ತು. ಆದರೆ, ಕೇರಳದಲ್ಲಿ 60 ಲಕ್ಷ ರೂ. ಸಾಲವಿದೆ ಎಂಬ ಮಾತನ್ನು ನಾನು ನಂಬವುದಿಲ್ಲ. ಈ ಬಗ್ಗೆ ನನಗೆ ಸ್ಪಷ್ಟತೆಯಿಲ್ಲ’ ಎಂದಿದ್ದಾರೆ.

‘ಇನ್ನು ಮುಂದೆ ಅಫಾನ್ ಮುಖ ನೋಡಲು ನನಗೆ ಇಷ್ಟವಿಲ್ಲ. ಅವನಿಂದಾಗಿ ನಾನು ನನ್ನ ಕಿರಿಯ ಮಗ, ತಾಯಿ, ಸಹೋದರ ಮತ್ತು ಸಹೋದರನ ಹೆಂಡತಿಯನ್ನು ಕಳೆದುಕೊಂಡೆ. ನನ್ನ ತಾಯಿ ಅಫಾನ್ ಅನ್ನು ತುಂಬಾ ಪ್ರೀತಿಸುತ್ತಿದ್ದರು. ಅಫಾನ್ ಎಲ್ಲಾದರೂ ಹೊರಗೆ ಹೋದರೆ, ಆತನ ಕೈಗೆ ಹಣ ಕೊಟ್ಟು ಕಳಿಸುತ್ತಿದ್ದರು. ನನ್ನ ತಾಯಿ ನನ್ನ ಇಬ್ಬರು ಮಕ್ಕಳನ್ನು ಬಹಳ ಪ್ರೀತಿಯಿಂದ ಬೆಳೆಸಿದ್ದರು ಎಂದು ಅಳಲು ತೋಡಿಕೊಂಡಿದ್ದಾರೆ.

ಏನಿದು ಪ್ರಕೆರಣ?

ಕೇರಳದ ತಿರುವನಂತಪುರಂನಲ್ಲಿ ಯುವಕನೊಬ್ಬನಿಂದ ನಡೆದ ಸಾಮೂಹಿಕ ಹತ್ಯೆ ಪ್ರಕರಣ ಸದ್ಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ತನ್ನ ಪ್ರೇಯಸಿಯೂ ಸೇರಿದಂತೆ ಕುಟುಂಬದ ಐವರನ್ನು 23 ವರ್ಷದ ಅಫಾನ್ ಕೇರಳದ ವೆಂಜರಮೂಡಿನಲ್ಲಿ ಬರ್ಬರವಾಗಿ ಹತ್ಯೆಗೈದಿದ್ದ. ಈ ಕೊಲೆಯ ಹಿಂದಿರುವ ಕಾರಣವೇನು? ತನ್ನವರನ್ನೇ ಇಷ್ಟೂ ಕ್ರೂರವಾಗಿ ಹತ್ಯೆಗೈಯುವ ಉದ್ದೇಶ ಏನಿತ್ತು ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಈ ಪ್ರಕರಣ ಇನ್ನೂ ತನಿಖೆಯಲ್ಲಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!