
ಮಾಜಿ ಪ್ರಿಯಕರನನ್ನು ಕೊಲೆ ಮಾಡಿ, ರೈಲು ಹಳಿಯ ಮೇಲೆ ಮೃತದೇಹ ಎಸೆದಿದ್ದ ಯುವತಿ, ಆಕೆಯ ಪತಿ ಸೇರಿದಂತೆ ಮೂವರನ್ನು ರೈಲ್ವೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲ್ಲೂಕಿನ ದೊಡ್ಡೂರು ಗ್ರಾಮದ ನಿವಾಸಿ ಸತ್ಯವಾಣಿ(27), ಕೋನೆರಪಲ್ಲಿಯ ವರದರಾಜ್(23) ಹಾಗೂ ಬೆಂಗಳೂರಿನ ದಾಸನಪುರ ಹೋಬಳಿಯ ಆಲೂರು ಗ್ರಾಮದ ಸಿ.ಶ್ರೀನಿವಾಸ್ ಬಂಧಿತರು.
ಈ ಮೂವರೂ ಸೇರಿಕೊಂಡು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಶೂಲಗಿರಿ ಸಮೀಪದ ವಿ.ಐ.ಪಿ ನಗರದ ನಿವಾಸಿ ಲೋಗನಾಥನ್(24) ಎಂಬಾತನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು.
ಫೆ.19ರಂದು ಚಿಕ್ಕಬಾಣಾವಾರ-ನೆಲಮಂಗಲ ರೈಲು ನಿಲ್ದಾಣಗಳ ಮಧ್ಯೆ 25ರಿಂದ 30 ವರ್ಷದ ಅಂದಾಜಿನ ಪುರುಷನ ಮೃತದೇಹವು ಪತ್ತೆ ಆಗಿತ್ತು. ಮೃತದೇಹ ತುಂಡಾದ ಸ್ಥಿತಿಯಲ್ಲಿ ಬಿದ್ದಿತ್ತು. ಪರಿಶೀಲನೆ ನಡೆಸಿದಾಗ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು ಕಂಡುಬಂದಿತ್ತು. ಅಲ್ಲಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು. ಆಲೂರುಪಾಳ್ಯ-ನರಸೀಪುರ ರಸ್ತೆಯ ಪಕ್ಕದಲ್ಲಿಯೂ ರಕ್ತದ ಕಲೆಗಳು ಪತ್ತೆ ಆಗಿದ್ದವು. ದುಷ್ಕರ್ಮಿಗಳು ಕೊಲೆ ಮಾಡಿ ಮೃತದೇಹವನ್ನು ರೈಲು ಹಳಿಯ ಮೇಲೆ ತಂದು ಹಾಕಿದ್ದು ಮೇಲ್ನೋಟಕ್ಕೆ ಕಂಡುಬಂದಿತ್ತು. ಪ್ರಕರಣ ಮುಚ್ಚಿಹಾಕಲು ಹೀಗೆ ಮಾಡಲಾಗಿತ್ತು. ಅದೇ ಮಾರ್ಗದಲ್ಲಿ ರೈಲು ಚಲಿಸಿದ್ದರಿಂದ ಮೃತದೇಹವು ಎರಡು ತುಂಡಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು ಎಂದು ರೈಲ್ವೆ ಪೊಲೀಸರು ಹೇಳಿದರು.
ಆರು ತಂಡ ರಚನೆ:
‘ಕೊಲೆ ಪ್ರಕರಣ ಭೇದಿಸಲು ರೈಲ್ವೆ ಇಲಾಖೆ ಎಸ್‌ಪಿ ಮಾರ್ಗದರ್ಶನದಲ್ಲಿ ಬೆಂಗಳೂರು ದಂಡು ರೈಲ್ವೆ ವೃತ್ತದ ಸಿಪಿಐ ಜಿ.ಕಾಶೀನಾಥ್ ಅವರ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಲಾಗಿತ್ತು. ಮೃತನ ಚಹರೆ ಹಾಗೂ ಹೋಲಿಕೆ ಗಮನಿಸಿದಾಗ ತಮಿಳುನಾಡು ಮೂಲದವನಂತೆ ಕಂಡುಬಂದಿತ್ತು. ಮೂರು ತಂಡಗಳು ತಮಿಳುನಾಡಿಗೆ ತೆರಳಿದ್ದವು. ಹೊಸೂರು ಸೇರಿದಂತೆ ಸುತ್ತಮುತ್ತಲ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಶೂಲಗಿರಿ ಠಾಣೆಯಲ್ಲಿ ವ್ಯಕ್ತಿಯ ನಾಪತ್ತೆ ಪ್ರಕರಣ ದಾಖಲಾಗಿತ್ತು. ಫೋಟೊ ಪರಿಶೀಲಿಸಿದಾಗ ಮೃತ ವ್ಯಕ್ತಿಗೆ ಹೋಲಿಕೆ ಆಗಿತ್ತು. ಅದನ್ನು ಆಧರಿಸಿ ತನಿಖೆ ನಡೆಸಲಾಯಿತು’ ಎಂದು ಪೊಲೀಸರು ಹೇಳಿದರು.
‘ಸಹಜೀವನ ನಡೆಸುತ್ತಿದ್ದರು’: ‘ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಯಿತು. ಹೂವಿನ ವ್ಯಾಪಾರಿ ಸತ್ಯವಾಣಿ ಹಾಗೂ ಲೋಗನಾಥನ್ ನಾಲ್ಕು ವರ್ಷಗಳಿಂದ ಸಹಜೀವನ ನಡೆಸುತ್ತಿದ್ದರು. ನಂತರ, ಲೋಗನಾಥನ್‌ಗೆ ತಿಳಿಯದಂತೆ ವರದರಾಜ್‌ನನ್ನು ಸತ್ಯವಾಣಿ ಮದುವೆ ಆಗಿದ್ದಳು. ಮದುವೆ ವಿಷಯ ಗೊತ್ತಾಗಿ ತನ್ನೊಂದಿಗೆ ಬರುವಂತೆ ಸತ್ಯವಾಣಿಗೆ ಲೋಗನಾಥನ್ ತಾಕೀತು ಮಾಡಿದ್ದ. ಆಕೆಗೆ ಅವನ ಜತೆಗೆ ತೆರಳಲು ಇಷ್ಟವಿರಲಿಲ್ಲ. ನಂತರ,ಲೋಗನಾಥನ್ ಕೊಲೆಗೆ ಸಂಚು ರೂಪಿಸಿ, ಶೂಲಗಿರಿಯಿಂದ ಪುಸಲಾಯಿಸಿ ಆಲೂರಿಗೆ ಕರೆತಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಸಿ.ಶ್ರೀನಿವಾಸ್ ನೆರವು ಪಡೆದು ರೈಲ್ವೆ ಹಳಿಯ ಮೇಲೆ ಮೃತದೇಹ ಎಸೆದಿದ್ದರು’ ಎಂದು ಮೂಲಗಳು ತಿಳಿಸಿವೆ.
